ಬೆಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟ ಪುನಾರಚನೆಯಾಗುವುದು ಖಚಿತವಾಗಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ ಕೊಂಚ ಮುಂದೆ ಹೋಗುವ ಲಕ್ಷಣ ಕಾಣಿಸುತ್ತಿದೆ.ಸಂಪುಟ ಪುನಾರಚನೆ ಮತ್ತು ವಿಸ್ತರಣೆಗೆ ಎಲ್ಲ ಸಿದ್ಧತೆ ನಡೆಯುತ್ತಿದ್ದು, ಯಾರನ್ನು ಕೈಬಿಡಬೇಕು ಮತ್ತು ಯಾರಿಗೆ ಅವಕಾಶ ನೀಡಬೇಕೆನ್ನುವ ಚರ್ಚೆ ತೆರೆಮರೆಯಲ್ಲಿ ನಡೆಯುತ್ತಿದೆ. ಪರಿಣಾಮ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಸಚಿವರು, ಉಳಿಯಲು ಲಾಬಿ, ಹೋರಾಟ ನಡೆಸುತ್ತಿದ್ದಾರೆ. ಹಾಗೆಯೇ ಆಕಾಂಕ್ಷಿಗಳು ಗಾಡ್ ಫಾದರ್‍ಗಳ ಮೂಲಕ ಒತ್ತಡ ತೀವ್ರಗೊಳಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಂಪುಟ ಪುನಾರಚನೆಗೆ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದು, ಮುಹೂರ್ತ ನಿಗದಿಗೆ ಹೈಕಮಾಂಡ್ ಕಡೆ ನೋಡುತ್ತಿದ್ದಾರೆ. ಆದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಕ್ಟೋಬರ್ 6 ಮತ್ತು 7ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿಯವರೆಗೂ ಪುನಾರಚನೆ ಕಸರತ್ತು ಹೀಗೇ ಮುಂದುವರಿಯುವ ಸಾಧ್ಯತೆ ಕಾಣುತ್ತಿದೆ. ಅಂದರೆ ಸಿಎಂ ಸಿದ್ದರಾಮಯ್ಯ ಸೆ.23ರಂದು ದೆಹಲಿ ಪ್ರವಾಸ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ಪುನಾರಚನೆಗೆ ಒಪ್ಪಿಗೆ ಪಡೆದು ಬರುವವರಾದರೂ ಪುನಾರಚನೆಗೆ ಮಾತ್ರ ದಿನಾಂಕ ನಿಗದಿ ಆಗಲಾರದು ಎನ್ನಲಾಗಿದೆ.
ಅಕ್ಟೋಬರ್ 6ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿ ರಾಜ್ಯ ನಾಯಕರು ಮತ್ತು ಉಸ್ತುವಾರಿ ನಾಯಕರೊಂದಿಗೆ ಚರ್ಚಿಸಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಂತೆ ಪುನಾರಚನೆ ಮತ್ತು ವಿಸ್ತರಣೆ ಪ್ರಸವ ಪೂರ್ಣವಾಗಲಿದೆ.
ದಿಗ್ವಿಜಯ್ ಹಿಂದಿರುಗುವುದೂ ವಿಳಂಬ?: ಇದಕ್ಕೆ ಪೂರಕವಾಗಿ ಎಐಸಿಸಿ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ವಿದೇಶ ಪ್ರವಾಸದಿಂದ ವಾಪಸಾಗುವ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ದಿಗ್ವಿಜಯ್ ಸಿಂಗ್ ಅವರ ಪುತ್ರಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರು ಸೆ.21ರಂದೇ ಹಿಂದಿರುಗುತ್ತಾರೆ ಎನ್ನುವುದೂ ಖಚಿತವಾಗಿಲ್ಲ. ರಾಜ್ಯ ಉಸ್ತುವಾರಿ ಇಲ್ಲದ ಸಮಯದಲ್ಲಿ ಸಂಪುಟ ಪುನಾರಚನೆ ಮಾಡುವ ಅವಸರವೂ ಹೈಕಮಾಂಡ್‍ಗೆ ಇಲ್ಲ. ಹೀಗಾಗಿ ಸಂಪುಟ ಪುನಾರಚನೆ ಮುಹೂರ್ತ ಕೊಂಚ ಮುಂದೆ ಹೋಗುವ ಸಾಧ್ಯತೆ ಕಾಣುತ್ತಿದೆ. ಸಚಿವ ಸ್ಥಾನ ಹೋಗುತ್ತದೆ ಎನ್ನುವ ಭೀತಿಯಲ್ಲಿರುವ ಸಚಿವ ಕಿಮ್ಮನೆ ರತ್ನಾಕರ್ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಿದರು. ಶರಣಪ್ರಕಾಶ್ ಪಾಟೀಲ್ ಕೂಡ ಐಐಟಿ ವಿಚಾರವಾಗಿ ಭೇಟಿಯಾಗಿದ್ದಾರೆ. ಬರ ಹಿನ್ನೆಲೆಯಲ್ಲಿ ಉಮಾಶ್ರೀ ಮಾತುಕತೆ ನಡೆಸಿದ್ದಾರೆ. ಇನ್ನು ಹಿರಿಯ ಶಾಸಕರಾದ ಕೆ.ಬಿ. ಕೋಳಿವಾಡ, ಮಲಕರೆಡ್ಡಿ,ಸಿದ್ದು ನ್ಯಾಮಗೌಡ ಅವರು ಸಿಎಂ ಜತೆ ಆಸೆ ಹಂಚಿಕೊಂಡಿದ್ದಾರೆ. ಒಟ್ಟಾರೆ ಭಾನುವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಸಚಿವರು, ಶಾಸಕರಿಂದ ಕಿಕ್ಕಿರಿದಿತ್ತು.ಸರ್ಕಾರಿ ರಜೆ ಎನ್ನುವ ಲಕ್ಷಣವನ್ನೇ ಮಾಯವಾಗಿಸಿತ್ತು.
ಕೂಡು, ಕಳೆಯುವ ಲೆಕ್ಕಾಚಾರ
ನಿರೀಕ್ಷೆಯಂತೆ ಸಂಪುಟದಲ್ಲಿ 8ರಿಂದ 10ಮಂದಿ ಸಚಿವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.ಇವರಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಸಚಿವರನ್ನಾಗಿ ಮಾಡಿ, ಸ್ಪೀಕರ್ ಸ್ಥಾನಕ್ಕೆ ಹಿರಿಯ ಶಾಸಕ ಕೆ.ಬಿ. ಕೋಳಿವಾಡ ಅವರನ್ನು ಕೂರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದೇ ರೀತಿ ರಾಜ್ಯ ಖಾತೆ ಸ್ಥಾನದಲ್ಲಿರುವ ಕಿಮ್ಮನೆ ಅವರನ್ನು ಉಳಿಸಿಕೊಂಡು ವಿನಯಕುಮಾರ್ ಸೊರಕೆ ಅವರಿಗೆ ಕೊಕ್ ಕೊಟ್ಟರೆ ಹೇಗೆ ಎಂದೂ ಚಿಂತನೆ ನಡೆದಿದೆ. ಜತೆಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಅವಕಾಶ ಕಲ್ಪಿಸಿ ಅದೇ ಸಮುದಾಯದ ಶ್ರೀನಿವಾಸ ಪ್ರಸಾದ್ ಅವರನ್ನು ವಿಶ್ರಾಂತಿಗೆ ಕಳುಹಿಸುವ ವಿಚಾರವೂ ಇದೆ. ಒಟ್ಟಾರೆ ಈ ಎಲ್ಲ ಲೆಕ್ಕಾಚಾರಗಳು ಇನ್ನೂ ಒಂದು ವಾರದವರೆಗೆ ನಡೆಯಲಿವೆ ಎಂದು ಮೂಲಗಳು ಹೇಳಿವೆ.
ಸಂಪುಟ ಸಂಬಂಧ ತಾವು ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿಲ್ಲ. ಕಳೆದ ಐದು ವರ್ಷಗಳಿಂದ ಪಕ್ಷವನ್ನು ಕಟ್ಟಿದ್ದೇನೆ.ನನಗೂ ಬದಲಾವಣೆ ಬೇಕು. ನಾನು ಸಚಿವನಾಗುವ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ
● ಡಾ ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ