ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುತ್ತಿರುವ ಮುಖ್ಯ ಪರೀಕ್ಷೆಗಳು ಸೋಮವಾರ ಯಾವುದೇ ಗೊಂದಲವಿಲ್ಲದೇ ನಡೆಯಿತು.
ಶುಕ್ರವಾರ ಪರೀಕ್ಷೆ ವೇಳೆ ಸೋಮವಾರ ನಡೆಯುವ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ವಿತರಿಸಿದ್ದರಿಂದ, ವಿದ್ಯಾರ್ಥಿಗಳು ಆತಂಕಗೊಂಡಿದ್ದರು. ಜೊತೆಗೆ ಪರೀಕ್ಷೆಯನ್ನು ಮುಂದೂಡುವಂತೆ ಅನೇಕರು ಪ್ರತಿಭಟಿಸಿದ್ದರು.
ಈ ಮಧ್ಯೆ ಪರೀಕ್ಷೆ ಮುಂದೂಡುವ ಪ್ರಶ್ನೆಯೇ ಇಲ್ಲ, ಅಲ್ಲಿ ನೀಡಲಾದ ಪ್ರಶ್ನೆಪತ್ರಿಕೆಗೂ ಪರೀಕ್ಷೆ ಮುಂದೂಡಿಕೆಗೂ ಸಂಬಂಧವಿಲ್ಲ ಎಂದು ಕೆಪಿಎಸ್ಸಿ ಸ್ಪಷ್ಟಪಡಿಸಿತು.ಸೋಮವಾರ ನಡೆದ ಪರೀಕ್ಷೆಯಲ್ಲಿ ಯಾವುದೇ ಗೊಂದಲ ಕಂಡುಬರಲಿಲ್ಲ.ಈ ಮೂಲಕ ಅಭ್ಯರ್ಥಿಗಳಲ್ಲಿ ಮೂಡಿದ್ದ ಆತಂಕ ಕೊಂಚ ನಿವಾರಣೆಯಾದಂತಾಗಿದೆ.ಸಾಮಾನ್ಯ ಅಧ್ಯಯನದ ಮೂರನೇ ಮತ್ತು ನಾಲ್ಕನೇ ಪ್ರಶ್ನೆಪತ್ರಿಕೆಗಳಿಗೆ ಸೋಮವಾರ ಪರೀಕ್ಷೆ ನಡೆಯಿತು.ಶನಿವಾರ ಬಹಿರಂಗಗೊಂಡಿ
ದ್ದ ಪ್ರಶ್ನೆಪತ್ರಿಕೆಗಳಲ್ಲಿದ್ದ ಪ್ರಶ್ನೆಗಳಾವುವೂ ಸೋಮವಾರದ ಪ್ರಶ್ನೆಪತ್ರಿಕೆಗಳಲ್ಲಿ ಇರಲಿಲ್ಲ ಎಂದು ಅಭ್ಯರ್ಥಿಗಳು ಖಚಿತ ಪಡಿಸಿದ್ದಾರೆ. ಮಂಗಳವಾರ ಮುಖ್ಯ ಪರೀಕ್ಷೆಯ ಕೊನೆಯ ದಿನವಾಗಿದ್ದು, ಐಚ್ಛಿಕ ವಿಷಯಗಳ 2 ಪರೀಕ್ಷೆಗಳು ನಡೆಯಲಿವೆ.
ಸಿಎಂ ಅಸಮಾಧಾನ
ಬೆಂಗಳೂರಿನ ಚಾಮರಾಜ ಪೇಟೆಯ ಕೆಪಿಎಸ್ಸಿ ಪರೀಕ್ಷೆ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಸರಿಯಾದ ಮೂಲ ಸೌಕರ್ಯ ಕಲ್ಪಿಸದೇ ಇರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸ್ಥಳಕ್ಕೆ ತೆರಳಿ ವರದಿ ನೀಡುವಂತೆ ಮುಖ್ಯಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.