ಉಂಡ ಮನೆಗೇ ಚಿನ್ನ ಕನ್ನ
ಚಿನ್ನಾಭರಣ ತಯಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಅಲ್ಲಿಂದಲೇ ಚಿನ್ನಾಭರಣ ಕಳವು ಮಾಡಿ ಮಾರಾಟ ಮಾಡುತ್ತಿದ್ದ...
ಬೆಂಗಳೂರು: ಚಿನ್ನಾಭರಣ ತಯಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಅಲ್ಲಿಂದಲೇ ಚಿನ್ನಾಭರಣ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು 20 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಹಾಗೂ 1 ಕಾರು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ಪುರ ಸಮೀಪದ ಅಯ್ಯಪ್ಪ ನಗರ ನಿವಾಸಿ ಪಶ್ಚಿಮ ಬಂಗಾಳ ಮೂಲದ ಸುಬೀರ್ ಮಂಡಲ್ (32) ಬಂಧಿತ ಆರೋಪಿ.
ವೈಟ್ ಫೀಲ್ಡ್ ನಲ್ಲಿರುವ ರಾಜೇಶ್ ಎಕ್ಸ್ ಪೋರ್ಟ್ ಚಿನ್ನ ತಯಾರಿಕೆ ಕಾರ್ಖಾನೆಯಲ್ಲಿ ಮೆಲ್ಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಕೆಲಸ ಮುಗಿಸಿಕೊಂಡು ಹೋಗುವಾಗ ಚಿನ್ನ ಕರಗಿಸುವ ವೇಳೆ ಪ್ರತಿ ನಿತ್ಯ 1 ಗ್ರಾಂನಿಂದ ಹಿಡಿದು ಐದು ಗ್ರಾಂ ಚಿನ್ನವನ್ನು ಸಣ್ಣ ಕಡ್ಡಿ ಮಾದರಿಯಲ್ಲಿ ತಯಾರಿಸಿಕೊಂಡು ಅದನ್ನು ತನ್ನ ಪ್ಯಾಂಟಿನಲ್ಲಿರುವ ಹುಕ್ ನ ಹಿಂಭಾಗದಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದ. ಅದು ಯಾರಿಗೂ ಗೊತ್ತಾಗದಂತೆ ಹೋಗುತ್ತಿದ್ದ. ಆರೋಪಿ ಕಳೆದ ಒಂದು ವರ್ಷದಿಂದ ಇದೇ ರೀತಿ ಕಳವು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿ ಎರಡು ವರ್ಷಗಳಿಂದ ರಾಜೇಶ್ ಎಕ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ.
ಕೆಲ ದಿನಗಳ ಹಿಂದೆ ಆರೋಪಿ ನಗರತ್ ಪೇಟೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಅಲ್ಲದೇ, ಕೆಲ ಆಭರಣ ಮಳಿಗೆಗಳಲ್ಲಿ ತನ್ನ ಕೈಯಲ್ಲಿದ್ದ ಬ್ರೆಸ್ಲೆಟ್ ಮಾರಾಟಕ್ಕೆ ಯತ್ನಿಸಿದ್ದ. ಆದರೆ, ಅದನ್ನು ಯಾರೂ ಖರೀದಿಸಿರಲಿಲ್ಲ. ಈ ಪೈಕಿ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಸುಬೀರ್ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ 70 ಗ್ರಾಂ ಬ್ರೆಸ್ಲೆಟ್, 2 ದುಬಾರಿ ಬೆಲೆ ಮೊಬೈಲ್ ಫೋನ್ಗಳು ಸಿಕ್ಕಿವೆ. ಚಿನ್ನದ ಮೂಲದ ಬಗ್ಗೆ ವಿಚಾರಿಸಿದಾಗ ಆತ ಸರಿಯಾಗಿ ಉತ್ತರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ತಾನು ರಾಜೇಶ್ ಎಕ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದು ಚಿನ್ನಾಭರಣ ಕಳವು ಮಾಡಿ ತಯಾರಿಸಿದ್ದ ಒಡವೆ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನ ಮನೆಯ ಮೇಲೆ ದಾಳಿ ನಡೆಸಿದಾಗ ಅಪಾರ ಚಿನ್ನಾಭರಣ ಹುಂಡೈ ಐ-20 ಕಾರು ಪತ್ತೆಯಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 20 ಲಕ್ಷ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂರು ಸುತ್ತಿನ ಭದ್ರತೆ:
ರಾಜೇಶ್ ಎಕ್ಸ್ ಪೋರ್ಟ್ ನಲ್ಲಿ ಪ್ರತಿನಿತ್ಯ ನೂರಾರು ಕೆಜಿ ಚಿನ್ನಾಭರಣ ಕರಗಿಸಿ ಅವುಗಳಿಗೆ ಒಡವೆ ರೂಪ ನೀಡಲಾಗುತ್ತದೆ. ಹೀಗಾಗಿ, ಕಾರ್ಖಾನೆಯೊಳಗೆ ಹೋಗಿ ಕೆಲಸ ಮುಗಿಸಿಕೊಂಡು ಹೊರಗೆ ಬರುವ ಪ್ರತಿಯೊಬ್ಬರನ್ನು ಮೂರು ಸುತ್ತಿನಲ್ಲಿ ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತದೆ.
ಮೊದಲನೇ ಹಂತದಲ್ಲಿ ಭದ್ರತಾ ಸಿಬ್ಬಂದಿ ಕೆಲಸಗಾರರನ್ನು ನೇರವಾಗಿ ತಪಾಸಣೆ ಮಾಡುತ್ತಾರೆ. 2ನೇ ಹಂತದಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಮಾನಿಟರ್ ಗಳ ಮುಂದೆ ಕುಳಿತ ಗಾರ್ಡ್ಗಳು ಸಿಬ್ಬಂದಿಯ ಚಲನವಲನ ವೀಕ್ಷಿಸುತ್ತಾರೆ.ಮೂರನೇಯದಾಗಿ ಮೆಟಲ್ ಡಿಟೆಕ್ಟರ್ ದ್ವಾರದ ಮೂಲಕ ಸಿಬ್ಬಂದಿಯನ್ನು ಕಳುಹಿಸಲಾಗುತ್ತದೆ.ಆದರೆ, ಈ ಎಲ್ಲ ದ್ವಾರಗಳಲ್ಲೂ ಸಿಕ್ಕಿ ಬೀಳದಂತೆ ಆರೋಪಿ ಸುಬೀರ್ ಚಿನ್ನಾಭರಣ ಸಾಗಿಸುತ್ತಿದ್ದ.
ಆರೋಪಿ ಸಣ್ಣ ಪ್ರಮಾಣದಲ್ಲಿ ಚಿನ್ನಾಭರಣ ಕದಿಯುತ್ತಿದ್ದ. ಕದ್ದ ಚಿನ್ನವನ್ನು ಆಭರಣ ಮಳಿಗೆಗಳು ಅಥವಾ ಪರಿಚಿತರಿಗೆ ನೀಡಿ ಆಭರಣ ಮಾಡಿಸುತ್ತಿದ್ದ. ಮಾರಾಟ ಮಾಡಿ ಸಂಪಾದಿಸಿದ ಹಣದಿಂದ ಹುಂಡೈ ಐ20 ಕಾರು ಖರೀದಿಸಿದ್ದ. ಕಳವು ಮಾಡಿ ಸಂಪಾದಿಸಿದ
ಹಣವನ್ನು ತೆಗೆದುಕೊಂಡು ಪಶ್ಚಿಮ ಬಂಗಾಳಕ್ಕೆ ತೆರಳುವ ಸಂಚು ರೂಪಿಸಿದ್ದ. ಚಿನ್ನ ಕಳ್ಳತನ ಬಗ್ಗೆ ರಾಜೇಶ್ ಎಕ್ಸ್ ಪೋರ್ಟ್ ನ ಮಾಲೀಕರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಲಹೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.ಅಲ್ಲದೇ ಪ್ರಕರಣವನ್ನು ಮುಂದಿನ ತನಿಖೆಗಾಗಿ ವೈಟ್ ಫೀಲ್ಡ್ ಪೊಲೀಸರಿಗೆ ವರ್ಗಾಯಿಸಲಾಗಿದೆ.
ಕಳವು ಹೇಗೆ?: ಚಿನ್ನ ಕರಗಿಸುವುದು ವೇಸ್ಟೇಜ್ ಪ್ರತ್ಯೇಕಿಸುವುದನ್ನು ಕರಗತ ಮಾಡಿಕೊಂಡಿದ್ದ ಸುಬೀರ್, ಚಿನ್ನಾಭರಣ ಕರಗಿಸುವಾಗ ವೇಸ್ಟೇಜ್ ಪೌಡರ್ ಹಾಗೂ ಕರಗಿಸಿದ ಚಿನ್ನವನ್ನು ಒಂದುಗೂಡಿಸುತ್ತಿದ್ದ. ಅವುಗಳನ್ನು ಸಣ್ಣ ಕಡ್ಡಿಗಳಂತೆ ಮಾಡುತ್ತಿದ್ದ. ಇದರಿಂದ ಅದು ಚಿನ್ನಾಭರಣ ಎಂದು ಗೊತ್ತಾಗುತ್ತಿರಲಿಲ್ಲ. ಅದನ್ನು ಸ್ಟೀಲ್ನಿಂದ ತಯಾರಿಸಿ ಪ್ಯಾಂಟಿನ ಹುಕ್ಕಿನ ಹಿಂಭಾಗದಲ್ಲಿಟ್ಟುಕೊಂಡು ಹೋಗುತ್ತಿದ್ದ.
ಸಣ್ಣ ಪ್ರಮಾಣದಲ್ಲಿ ವೇಸ್ಟೇಜ್ ಜತೆ ಚಿನ್ನ ಸೇರಿಸಿ ಅದನ್ನು ಸಾಗಿಸುತ್ತಿದ್ದ ಕಾರಣ ಕಾರ್ಖಾನೆಯ ಭದ್ರತಾ ಸಿಬ್ಬಂದಿಗೆ ಗೊತ್ತಾಗುತ್ತಿರಲಿಲ್ಲ. ಆರೋಪಿ ಬಂಧಿಸಿ ಕಾರ್ಖಾನೆ ಮಾಲೀಕರಿಗೆ ಮಾಹಿತಿ ನೀಡಿದಾಗಲೇ ಅವರಿಗೆ ಭಾರಿ ಪ್ರಮಾಣದ ಚಿನ್ನ ಕಳವಾಗಿರುವುದು ಗೊತ್ತಾಗಿದೆ.
ಸಂದೀಪ್ ಪಾಟೀಲ್ ಡಿಸಿಪಿ ಕೇಂದ್ರ ವಿಭಾಗ