ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಪುತ್ರ ಅಶ್ವಿನ್ ಬಂಧನವಾದ ಬಳಿಕ ಧೀರ್ಘ ರಜೆಯಲ್ಲಿರುವ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್ ರಾವ್ ಮತ್ತೆ ತಮ್ಮ ರಜೆಯನ್ನು ವಿಸ್ತರಿಸಿದ್ದಾರೆ.
ಅ.1ರಿಂದ ಅ.21ರವರೆಗೆ ರಜೆ ವಿಸ್ತರಿಸಲಾಗಿದ್ದು ಅದಕ್ಕೆ ಕಾರಣವನ್ನು ನಮೂದಿಸಿಲ್ಲ ಎಂದು ಹೇಳಲಾಗಿದೆ. ರಾಜ್ಯಪಾಲ ವಿ.ಆರ್ ವಾಲಾ ಹಾಗೂ ಲೋಕಾಯುಕ್ತ ಸಂಸ್ಥೆಯ ಉಸ್ತುವಾರಿ ರಿಜಿಸ್ಟ್ರಾರ್ ಎಂ.ಎಸ್. ಬಾಲಕೃಷ್ಣ ಅವರಿಗೆ ರಜೆಯ ಪತ್ರವನ್ನು ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾ-ಚಾರ ಪ್ರಕರಣದಲ್ಲಿ ತಮ್ಮ ಪುತ್ರ ಅಶ್ವಿನ್ ರಾವ್ ಬಂಧನವಾಗುತ್ತಿದ್ದಂತೆ ಜು.27 ರಿಂದ ಆ.14ರವರೆಗೆ ರಜೆ ಹಾಕಿದ್ದ ನ್ಯಾ.ವೈ.ಭಾಸ್ಕರ್ ರಾವ್ ನಂತರ ಆ.31ರ ವರೆಗೆ ವಿಸ್ತರಿಸಿದ್ದರು. ಬಳಿಕ ಸೆ.30ರವರೆಗೆ ರಜೆ ವಿಸ್ತರಣೆ ಮಾಡಿಕೊಂಡಿದ್ದರು. ಇದೀಗ ಮೂರನೇ ಬಾರಿ ಅ.21ರವರೆಗೆ ರಜೆ ವಿಸ್ತರಿಸಿಕೊಂಡಿದ್ದಾರೆ. ಮಗನ ವಿರುದ್ಧ ಆರೋಪ ಸಾಬೀತಾದಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದರು. ಅಲ್ಲದೇ, ರಾಜಿನಾಮೆಗೆ ಆಗ್ರಹಿಸಿ ಲೋಕಾಯುಕ್ತ ಸಂಸ್ಥೆಯ ಮುಂದೆ ಸೇರಿದಂತೆ ಎಲ್ಲೆಡೆ ತೀವ್ರ ಪ್ರತಿಭಟನೆಗಳು ನಡೆದಿದ್ದರೂ ಲೋಕಾಯುಕ್ತರು ರಾಜಿನಾಮೆ ನೀಡಲು ಮುಂದಾಗಿರಲಿಲ್ಲ. ರಜೆಯೂ ಹಾಕದೆ ಪ್ರತಿನಿತ್ಯ ಕಚೇರಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಪುತ್ರ ಅಶ್ವಿನ್ ರಾವ್ ಬಂಧನವಾಗುತ್ತಿದ್ದಂತೆ ರಜೆಯ ಮೇಲೆ ತೆರಳಿದ್ದು, ರಜೆಯನ್ನು ವಿಸ್ತರಣೆ ಮಾಡುತ್ತಲೇ ಬಂದಿದ್ದಾರೆ.