ರಾಹುಲ್ ರಾಜ್ಯ ಭೇಟಿ ಮುಂದಕ್ಕೆ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಉದ್ದೇಶಿತ ರಾಜ್ಯ ಭೇಟಿ ಮತ್ತೆ ಮುಂದಕ್ಕೆ ಹೋಗಿದೆ. ಹೀಗಾಗಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕಾಂಗ್ರೆಸ್ ನಾಯಕರ ಕಾರ್ಯಕ್ರಮಕ್ಕೆ ಗ್ರಹಣ ಹಿಡಿದಿದೆ...
ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಉದ್ದೇಶಿತ ರಾಜ್ಯ ಭೇಟಿ ಮತ್ತೆ ಮುಂದಕ್ಕೆ ಹೋಗಿದೆ. ಹೀಗಾಗಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕಾಂಗ್ರೆಸ್ ನಾಯಕರ ಕಾರ್ಯಕ್ರಮಕ್ಕೆ ಗ್ರಹಣ ಹಿಡಿದಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆಯು ರಾಹುಲ್ ಗಾಂಧಿ ಭೇಟಿ ಕಾರ್ಯಕ್ರಮಕ್ಕೆ ತಯಾರಿ ಬಗ್ಗೆ ಸಮಾಲೋಚನೆ ನಡೆಸಿತು. ಈ ಮೊದಲು ನಿಗದಿಯಾಗಿದ್ದಂತೆ ಅಕ್ಟೋಬರ್ 6 ಹಾಗೂ 7 ರಂದು ರಾಜ್ಯಕ್ಕೆ ರಾಹುಲ್ ಭೇಟಿ ನೀಡಬೇಕಿತ್ತು. ಆದರೆ ಅಂದು ಜರ್ಮನಿಯ ಕಾನ್ಸುಲೇಟ್ ಛಾನ್ಸಲರ್ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು ಪ್ರಧಾನಿ ಸಹ ಭಾಗವಹಿಸುವ ಸಾಧ್ಯತೆಗಳಿರುವುದರಿಂದ ಮುಖ್ಯಮಂತ್ರಿ ಹಾಜರಿರಬೇಕಾಗುತ್ತದೆ. ಆ ಸಂದರ್ಭದಲ್ಲಿ ರಾಜ್ಯಕ್ಕೆ ರಾಹುಲ್ ಭೇಟಿ ನೀಡಿದರೆ ಸಿಎಂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಾಹುಲ್ ಭೇಟಿ ಕಾರ್ಯಕ್ರಮ ಬದಲಾಗಿದೆ.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ್ ಅವರು ರಾಜ್ಯದಲ್ಲಿ ಈತನಕ ಒಟ್ಟು 518 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದರಲ್ಲಿ ಮಂಡ್ಯದಲ್ಲಿ ಅತ್ಯಧಿಕ 51 ಹಾಗೂ ನಂತರದ ಸ್ಥಾನ ಹಾವೇರಿ ಜಿಲ್ಲೆಯದ್ದಾಗಿದೆ. ವಿದೇಶಿ ಗಣ್ಯರ ಭೇಟಿ ಹಿನ್ನೆಲೆಯಲ್ಲಿ ರಾಹುಲ್ ಪ್ರವಾಸ ಮುಂದಕ್ಕೆ ಹೋಗಿದೆ. ಹೊಸ ದಿನಾಂಕವನ್ನು ಅವರ ಕಚೇರಿ ನಿಗದಿಪಡಿಸಲಿದೆ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿ 9 ರಿಂದ 10 ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಸಿದ್ದಾರೆ. ಅದನ್ನು ನೋಡಿಕೊಂಡು ರಾಜ್ಯ ಪ್ರವಾಸದ ದಿನಾಂಕ ನಿಗದಿಯಾಗಲಿದೆ. ರಾಹುಲ್ ಗಾಂಧಿ ಕಚೇರಿಯ ಪ್ರತಿನಿಧಿಯೊಬ್ಬರು ಬೆಂಗಳೂರಿಗೆ ಆಗಮಿಸಿದ್ದು ಅವರಿಗೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಅಭ್ಯರ್ಥಿಗಳ ಹೆಸರು ಸೂಚನೆ: ಪಕ್ಷದ ಸಂಘಟನೆ, ಸದಸ್ಯತ್ವ ನೋಂದಣಿ, ಮುಂಬರುವ ವಿಧಾನ ಪರಿಷತ್ತಿನ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಸ್ಥಳೀಯ ನಾಯಕರೊಂದಿಗೆ ಸಮಾಲೋಚಿಸಿ ಮೂವರು ಅಭ್ಯರ್ಥಿಗಳ ಹೆಸರು ಶಿಫಾರಸಿಗೆ ಸೂಚಿಸಲಾಗಿದೆ. ತಿಂಗಳೊಳಗೆ ಜಿಲ್ಲಾಧ್ಯಕ್ಷರು ಪಟ್ಟಿ ಕಳುಹಿಸಿಕೊಡಬೇಕು. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಕಳಸಾ ಬಂಡೂರಿ ಯೋಜನೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಗೋವಾದ ಪರ, ಕರ್ನಾಟಕದ ವಿರುದ್ಧವೆಂದು ಎಲ್ಲೂ ಹೇಳಿಲ್ಲ. ಬಿಜೆಪಿಯವರು ಅನಗತ್ಯವಾಗಿ ದೊಡ್ಡ ವಿಷಯ ಮಾಡುತ್ತಿದ್ದಾರೆ. ಉಭಯ ರಾಜ್ಯಗಳು ಸೌಹಾರ್ದತೆಯಿಂದ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಸೋನಿಯಾಗಾಂಧಿ ಅವರು ಯಾವತ್ತೂ ಅಡ್ಡಿ ಬಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದರು.
ಪದಾಧಿಕಾರಿಗಳಿಗೆ ಸೂಚನೆ: ಪಕ್ಷದ ಸಂಘಟನೆ ಹಾಗೂ ಸದಸ್ಯತ್ವ ನೋಂದಣಿಗೆ ಸಹಕಾರ ನೀಡದ ಶಾಸಕರು ಹಾಗೂ ಸಚಿವರ ಹೆಸರನ್ನು ಗೌಪ್ಯವಾಗಿ ಕೊಡಿ, ಅಂಥವರ ಹೆಸರನ್ನು ರಾಹುಲ್ ಗಾಂಧಿ ಅವರಿಗೆ ಕಳುಹಿಸಿಕೊಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರು ಸೂಚಿಸಿದರೆಂದು ತಿಳಿದುಬಂದಿದೆ. ಜತೆಗೆ ನಿಗಮ, ಮಂಡಲಿಗಳ ನಿರ್ದೇಶಕ, ಸದಸ್ಯರ ನೇಮಕದಲ್ಲಿ ವಿಳಂಬ ಆಗುತ್ತಿರುವುದರ ಬಗ್ಗೆ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದಾಗ ಮುಖ್ಯಮಂತ್ರಿ ಜತೆ ಚರ್ಚಿಸಿ ಆದಷ್ಟು ಬೇಗ ನೇಮ ಕಾತಿ ಪೂರ್ಣಗೊಳಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.