ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಭ್ರಷ್ಟಾಚಾರದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಹೀಗೆಂದವರು ಪ್ರತಿಪಕ್ಷದವರಲ್ಲ. ಸ್ವತಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್. ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಒಂಬುಡ್ಸ್‍ಮನ್‍ಗಳ ಹಾಗೂ ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಕ್ಕೆ ಹಿಂದಿನಿಂದಲೂ ಒಳ್ಳೆಯ ಹೆಸರಿತ್ತು. ಆದರೆ ಕಳೆದ 8 ವರ್ಷಗಳಿಂದೀಚೆಗೆ ಭ್ರಷ್ಟಾಚಾರ ಹೆಚ್ಚಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಭ್ರಷ್ಟಾಚಾರದ ಅಪಖ್ಯಾತಿ ಬಂದಿದೆ. ರಾಜ್ಯವನ್ನು ಈಗ ಮೋಸ್ಟ್ ಕರೆಪ್ಟ್ ಸ್ಟೇಟ್ ಎನ್ನುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಒಂಬುಡ್ಸ್‍ಮನ್ ದಿಟ್ಟತನದಿಂದ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ಪಾಟೀಲ್ ಸಲಹೆ ನೀಡಿದರು. ನರೇಗಾದಲ್ಲಿ ಆಗುತ್ತಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರಗಳನ್ನು ತಡೆಯಲು ಒಂಬುಡ್ಸ್‍ಮನ್ ಹೆಚ್ಚು ಆಸಕ್ತಿ ವಹಿಸಬೇಕು. ಪ್ರಮುಖವಾಗಿ ಒಂಬುಡ್ಸ್‍ಮನ್‍ಗಳು ತಮ್ಮಲ್ಲೇ ಒಂದು ತ್ರಿಸದಸ್ಯ ಸಮಿತಿ ರಚಿಸಿಕೊಳ್ಳಬೇಕು. ಅದಕ್ಕೆ ಕಾರ್ಯದರ್ಶಿಯಾಗಿರುವವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು. ಆನಂತರ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ತಮಗೆ ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ನರೇಗಾ ಯೋಜನೆಯಲ್ಲಿ ನಿರೀಕ್ಷಿತ ಫಲ ಸಿಗದಿರುವುದಕ್ಕೆ ಕಾರಣ. ಈ ಯೋಜನೆಯ ಬಗ್ಗೆ ಸ್ಥಳೀಯ ಸಂಸ್ಥೆಗಳೇ ಸರಿಯಾಗಿ ತಿಳಿದುಕೊಳ್ಳುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದನ್ನು ಪೂರ್ಣ ಅರ್ಥ ಮಾಡಿಕೊಂಡಿಲ್ಲ. ಆದ್ದರಿಂದಲೇ ಅನೇಕ ಕಡೆ ನರೇಗಾ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವುದಕ್ಕೆ ಅಧಿಕಾರಿಗಳೇ ಹಿಂದೇಟು ಹಾಕುತ್ತಿದ್ದಾರೆ. ಒಂಬುಡ್ಸ್‍ಮನ್‍ಗಳು ನರೇಗಾ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಬೇಕು. ಕಾನೂನಿನ ಅರಿವು ಒದಗಿಸಬೇಕು ಮತ್ತು ಯೋಜನೆ ಸದ್ಬಳಕೆಗೆ ದಾರಿ ತೋರಿಸಬೇಕು ಎಂದು ಎಚ್.ಕೆ.ಪಾಟೀಲ್ ಸೂಚಿಸಿದರು.
ನರೇಗಾ ಯೋಜನೆ ಸಾಮಾಜಿಕ ಲೆಕ್ಕಪರಿಶೋಧನೆಯಲ್ಲಿ ಆಂಧ್ರಪ್ರದೇಶ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕ ದ್ವಿತೀಯ ಸ್ಥಾನ ಗಳಿಸಿದೆ. ನಮ್ಮನ್ನು ಕೇರಳ ಅನುಕರಿಸಲು ಮುಂದಾಗಿದೆ. ಹಾಗೆಯೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳನ್ನು ಹೆಚ್ಚಿಸಲಾಗುತ್ತಿದ್ದು, ಜನವರಿ ಸಮಯಕ್ಕೆ ಉಡುಪಿ, ಶಿವಮೊಗ್ಗ, ಮಂಗಳೂರು, ಮಂಡ್ಯ ಜಿಲ್ಲೆಗಳನ್ನು ಘೋಷಣೆ ಮಾಡಲಾಗುವುದು ಎಂದು ವಿವರಿಸಿದರು.