ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಆರು ಕಡೆ ಸರಗಳ್ಳರ ಕೈಚಳಕ: 2 ಕಡೆ ಮಹಿಳೆಯರನ್ನು ಎಳೆದಾಡಿ ಗಾಯಗೊಳಿಸಿದ ದುಷ್ಕರ್ಮಿಗಳು

ಸರಗಳ್ಳತನ ನಿಯಂತ್ರಣಕ್ಕೆ ರಾಜ ಧಾನಿ ಪೊಲೀಸರು ತಲೆಕೆಡಿಸಿಕೊಂಡು ಹರಸಾಹಸ ಪಡುತ್ತಿದ್ದರೆ ಮತ್ತೊಂದೆಡೆ ಸರಗಳ್ಳರು ಅಟ್ಟಹಾಸ...

ಬೆಂಗಳೂರು: ಸರಗಳ್ಳತನ ನಿಯಂತ್ರಣಕ್ಕೆ ರಾಜ ಧಾನಿ ಪೊಲೀಸರು ತಲೆಕೆಡಿಸಿಕೊಂಡು ಹರಸಾಹಸ ಪಡುತ್ತಿದ್ದರೆ ಮತ್ತೊಂದೆಡೆ ಸರಗಳ್ಳರು ಅಟ್ಟಹಾಸ ಮುಂದುವರೆಸಿದ್ದು ಬುಧವಾರ ಒಂದೇ ದಿನ ಆರು ಕಡೆ ಸರಗಳವು ಮಾಡಿದ್ದಾರೆ. ಸರ ಎಳೆದುಕೊಳ್ಳುವ ಭರದಲ್ಲಿ ಇಬ್ಬರು ಮಹಿಳೆಯರನ್ನು ಎಳೆದಾಡಿ ಗಾಯಗೊಳಿಸಿದ್ದಾರೆ.

ಒಂದೇ ಗುಂಪಿನ ಸದಸ್ಯರು ಎರಡು ತಂಡಗಳಾಗಿ ಕಾರ್ಯಾಣೆಗೆ ಇಳಿದು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಮೃತಹಳ್ಳಿಯಲ್ಲಿ ಸರ ಕಿತ್ತುಕೊಳ್ಳುವ ವೇಳೆ ದುಷ್ಕರ್ಮಿಗಳು ಅತ್ಯಂತ ಅಮಾನವೀಯವಾಗಿ ವರ್ತಿಸಿದ್ದು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಳಿಗ್ಗೆ 5.45: ಜೆ.ಪಿ.ನಗರ 2ನೇ ಹಂತ, 19ನೇ ಮುಖ್ಯರಸ್ತೆಯಲ್ಲಿ ಬೆಳಿಗ್ಗೆ 5.45ಕ್ಕೆ ರಮಾ ಬಾಲಾಜಿ (55) ಎಂಬುವರ 30ಗ್ರಾಂನ ಸರವ ನ್ನು ಪಲ್ಸರ್ ಬೈಕ್‍ನಲ್ಲಿ ಬಂದು ದುಷ್ಕರ್ಮಿಗಳಿಬ್ಬರು ಸರ ದೋಚಿದ್ದಾರೆ. ರಮಾ ಅವರು ಮಗ ಸೂರಜ್ ಜತೆ ಬೆಳಿಗ್ಗೆ ಮನೆ ಸಮೀಪ ವಾಯುವಿಹಾರ ಮಾಡುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದ ಕಿಡಿಗೇಡಿ ಸರ ಕಿತ್ತುಕೊಂಡು ಸಹಚರನ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಸರ ಎಳೆದ ರಭಸಕ್ಕೆ ರಮಾ ಅವರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿದೆ.

ಬೆ. 5.50: ಬಿಟಿಎಂ ಲೇಔಟ್ ಎರಡನೇ ಹಂತದಲ್ಲಿ ಯಶೋಧಮ್ಮ (65) ಎಂಬುವರು ಮನೆಗೆಲಸಕ್ಕೆ ಹೋಗುತ್ತಿದ್ದಾಗ ಕಿಡಿಗೇಡಿಗಳು 16 ಗ್ರಾಂ ಸರ ಕಿತ್ತುಕೊಂಡು ಪರಾರಿ ಯಾಗಿದ್ದಾರೆ. 6.10: ಯಲಹಂಕ ಬಳಿಯ ಮಾರುತಿನಗರದಲ್ಲಿ ದೇಗುಲಕ್ಕೆ ಮನೆಗೆ ಹೋಗಿ ಮರಳುತ್ತಿದ್ದ ನಾಗ ಜ್ಯೋತಿ (50) ಬಳಿ ವಿಳಾಸ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ರು.1 ಲಕ್ಷದ 30 ಗ್ರಾಂನ ಸರ ಅಪಹರಿಸಿದ್ದಾರೆ.

ಬೆಳಿಗ್ಗೆ 6.15: ಸೌತ್ ಎಂಡ್ ವೃತ್ತದ ಎ ಅಡ್ಡರಸ್ತೆಯಲ್ಲಿ ರಾಜಮ್ಮ (70) ಎಂಬುವರ ಬಳಿ ವಿಳಾಸ ಕೇಳುವ ನೆಪದಲ್ಲಿ ತೆರಳಿದ ದುಷ್ಕರ್ಮಿಗಳು 40ಗ್ರಾಂನ ಸರ ಕಿತ್ತುಕೊಂಡು ಹೋಗಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಅವರು ಹತ್ತಿರದ ಅಂಗಡಿಗೆ ಹಾಲು ತರಲು ಹೋಗುತ್ತಿದ್ದಾಗ ಹಿಂದಿಯಲ್ಲಿ ಮಾತನಾಡುತ್ತಾ ವಿಳಾಸ ಕೇಳುವವನಂತೆ ಹತ್ತಿರ ಹೋಗಿದ್ದಾನೆ. ಹಿಂದಿ ಬರುವುದಿಲ್ಲ ಎಂದು ರಾಜಮ್ಮ ತಕ್ಷಣ ಅಂಗಡಿಯತ್ತ ಹೋಗಿದ್ದಾರೆ. ಅವರು ಹಾಲು ತೆಗೆದುಕೊಂಡು ವಾಪಸ್ ಬಂದಾಗಲೂ ಅಲ್ಲಿಯೇ ನಿಂತಿದ್ದ ಕಿಡಿಗೇಡಿ, ರಾಜಮ್ಮ ಗೇಟ್ ತೆರೆದು ಮನೆಯೊಳಗೆ ಹೋಗಬೇಕು ಎನ್ನುವಷ್ಟರಲ್ಲಿ 45ಗ್ರಾಂನ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಅವರು ಬಿಗಿಯಾಗಿ ಸರ ಹಿಡಿದುಕೊಂಡಿದ್ದರಿಂದ 40 ಗ್ರಾಂ ಸರ ದುಷ್ಕರ್ಮಿ ಪಾಲಾದರೆ 5 ಗ್ರಾಂ ಸರ ತುಂಡು ರಾಜಮ್ಮ ಅವರ ಕೈಯಲ್ಲಿ ಉಳಿದುಕೊಂಡಿದೆ.

ಎರಡು ಕಡೆ ಮಹಿಳೆಯರ ಎಳೆದಾಡಿದ ದುಷ್ಕರ್ಮಿಗಳು:
ಬೆ.6.20: ಅಮೃತಹಳ್ಳಿ ಸಮೀಪದ ಚಿರಂಜೀವಿ ಲೇಔಟ್‍ನಲ್ಲಿ ಮಂಗಳಾ (58) ಎಂಬುವರ ಸರ ಕಸಿಯಲು ಯತ್ನಿಸಿದ ದುಷ್ಕರ್ಮಿಗಳು ಅವರು ವಿರೋಧ ವ್ಯಕ್ತಪಡಿಸಿದಾಗ ಎಳೆದಾಡಿ ಗಾಯ ಗೊಳಿಸಿದ್ದಾರೆ. ಬೆಳಿಗ್ಗೆ 6.20ರ ಸುಮಾರಿಗೆ ಮಂಗಳಾ ಮನೆ ಮುಂದೆ ರಂಗೋಲಿ ಹಾಕುತ್ತಿದ್ದರು.

ಈ ವೇಳೆ ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳ ಪೈಕಿ ಒರ್ವ ಅವರ ಬಳಿ ಹೋಗಿ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಆಗ ಮಂಗಳಾ, ಸೀರೆಯ ಸೆರಗಿನಿಂದ ಕುತ್ತಿಗೆಯನ್ನು ಸುತ್ತಿಕೊಂಡು ಸರವನ್ನು ರಕ್ಷಿಸಿ ಕೊಂಡಿದ್ದಾರೆ. ಆದರೆ, ಮತ್ತೊಮ್ಮೆ ಸರವನ್ನು ಎಳೆದು ಕೊಳ್ಳಲು ಯತ್ನಿಸಿದಾಗ ರಸ್ತೆ ಮೇಲೆ ಬಿದ್ದ ಮಂಗಳಾ ಅವರಿಗೆ ತರಚಿದ ಗಾಯಗಳಾಗಿವೆ.

ಕೆಳಗೆ ಬಿದ್ದರೂ ಬಿಡದ ದುಷ್ಕರ್ಮಿ, ಮತ್ತೊಮ್ಮೆ ಸರ ಕಿತ್ತುಕೊಳ್ಳಲು ಕೈ ಹಾಕಿದ್ದಾನೆ. ಮಂಗಳಾ ಅವರ ಕೂಗಾಟ ಜೋರಾಗುತ್ತಿದ್ದಂತೆಯೇ ಸಮೀಪದಲ್ಲೇ ನಿಂತಿದ್ದ ಸಹಚರನ ಜತೆ ಪರಾರಿಯಾಗಿದ್ದಾನೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಮಹಿಳೆ ಮೇಲಿನ ದುಷ್ಕೃತ್ಯವನ್ನು ಗಮನಿಸಿದರೂ ಸಹಾಯ ಮಾಡಲಾಗದೆ ಮೂಕ ಪ್ರೇಕ್ಷಕರಾಗಿದ್ದರು. ಹಲವು ಬಾರಿ ಸರ ಎಳೆದ ಕಾರಣ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ.

8.05: ಬಿಎಚ್‍ಇಎಲ್ ಲೇಔಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಶಿಕ್ಷಕಿ ವಿಜಯಲಕ್ಷ್ಮಿ (50) ಎಂಬುವರ ಬಳಿ ಬಂದ ದುಷ್ಕರ್ಮಿ 32 ಗ್ರಾಂನ ಸರ ಕಿತ್ತುಕೊಂಡು ಸಮೀಪದಲ್ಲೇ ನಿಂತಿದ್ದ ಮತ್ತೊಬ್ಬನ ಜತೆ ಬೈಕ್‍ನಲ್ಲಿ ಪರಾರಿಯಾಗಿದ್ದಾನೆ. ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯಾಹ್ನ 12: ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪ್ರಭಾವತಿ (53) ಎಂಬುವರ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳುತ್ತಿದ್ದಾಗ ಪೀಣ್ಯ ಸಮೀಪದ ಇಂದಿರಾನಗರದಲ್ಲಿ ದಾಳಿ ಮಾಡಿದ ಸರಗಳ್ಳರು, ಅವರಿಂದ 25 ಗ್ರಾಂನ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಪ್ರಭಾವತಿ ಅವರು ತಂಗಿ ಸವಿತಾ ಜತೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಳ್ಳರು, 50  ಗ್ರಾಂ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾರೆ. ಅವರು ಸರವನ್ನು ಬಿಗಿಯಾಗಿ ಹಿಡಿದುಕೊಂಡಾಗ ಅದು ತುಂಡಾಗಿ 25 ಗ್ರಾಂ ಮಾತ್ರ ಕಳ್ಳರ ಪಾಲಾಗಿದೆ.

ಪೊಲೀಸರಿಗೆ ಸವಾಲು, ಮಹಿಳೆಯರಲ್ಲಿ ಆತಂಕ: ಸರಗಳ್ಳತನ ಪ್ರಕರಣಗಳು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು ಮಹಿಳೆಯರಲ್ಲಿ ಆತಂಕ ಬಾಗೂ ಭಯದ ವಾತಾವರಣ ನಿರ್ಮಿಸಿದೆ. ಹೀಗಾಗಿ, ಮಹಿಳೆಯರು ರಸ್ತೆಯಲ್ಲಿ ಒಂಟಿಯಾಗಿ ಓಡಾಡಲು ಹಿಂದೇಟು ಹಾಕುವಂತಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್, ನಗರದ ಏಂಟು ದಿಕ್ಕುಗಳಲ್ಲಿ ಟೋಲ್ ಕೇಂದ್ರಗಳು ಹಾಗೂ ಇತರ ಪ್ರವೇಶ ಪಾಯಿಂಟ್ ಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸುತ್ತಿದ್ದೇವೆ. ಹೀಗಾಗಿ, ಯಾರ್ಯಾರು ಅನುಮಾನಾಸ್ಪದವಾಗಿ ಓಡಾಡುತ್ತಾರೆ ಎಂಬುದರ ಮೇಲೆ ನಿಗಾ ಇರಿಸಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ