ಬೆಂಗಳೂರು: ಉದ್ಯಾನ ಭೂಮಿ ಅಕ್ರಮ ಒತ್ತುವರಿ ಪ್ರಕರಣದ ವಿಚಾರಣೆಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ಬಿಬಿಎಂಪಿ ಆಯುಕ್ತರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾ. ಎಸ್.ಕೆ ಮುಖರ್ಜಿ ಆದೇಶ ನೀಡಿದ್ದಾರೆ.
ಸರ್ಕಾರಿ ವಕೀಲರ ಮನವಿಯ ಹಿನ್ನೆಲೆಯಲ್ಲಿ ಆಯುಕ್ತರಿಗೆ ಕಾಲಾವಕಾಶ ನೀಡಲಾಗಿದ್ದು ಫೆ.3 (ಬುಧವಾರ) ನಡೆಯಲಿರುವ ವಿಚಾರಣೆಗೆ ಆಯುಕ್ತ ಕುಮಾರ್ ನಾಯಕ್ ಹಾಜರಾಗದೆ ಇದ್ದಲ್ಲಿ ಅವರನ್ನು ಬಂಧಿಸುವಂತೆ ಕೋರ್ಟ್ ಆದೇಶಿಸಿದೆ. ಸಹಕಾರ ನಗರದಲ್ಲಿರುವ ಸಾರ್ವಜನಿಕ ಉದ್ಯಾನದಲ್ಲಿ ಖಾಸಗಿ ಸಂಸ್ಥೆಯೊಂದು ಭೂಮಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿರುವ ಬಗ್ಗೆ ಚಕ್ರಪಾಣಿ ಎಂಬುವವರು ಹೈಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ಈಗಾಗಲೇ ಎರಡು ಬಾರಿ(ಜ.26 , 29 ) ರಂದು ವಿಚಾರಣೆಗೆ ಬಂದಿದೆ. ಆದರೆ ಈ ವರೆಗೂ ಬಿಬಿಎಂಪಿ ಪರ ವಾದ ಮಂಡಿಸುವುದಕ್ಕೆ ಯಾವುದೇ ವಕೀಲರು ಹಾಜರಾಗಿಲ್ಲ. ಅರ್ಜಿದಾರರೇ ಬಿಬಿಎಂಪಿಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ವಹಿಸಿರುವ ಬಿಬಿಎಂಪಿ ಈ ವರೆಗೂ ತನ್ನ ಪರ ವಾದ ಮಾಡುವುದಕ್ಕೆ ವಕೀಲರನ್ನು ನೇಮಿಸಿಲ್ಲ.
ವಕೀಲರನ್ನು ನೇಮಿಸದೆ ಇರುವುದು ಒಂದೆಡೆಯಾದರೆ ಉದ್ಯಾನವನದ ಜಾಗ ಒತ್ತುವರಿಯಾಗಿರುವುದರ ಬಗ್ಗೆ ನೀಡಲಾಗಿರುವ ದೂರನ್ನು ಆಯುಕ್ತ ಕುಮಾರ್ ನಾಯಕ್ ಈ ವರೆಗೂ ಪರಿಶೀಲನೆ ನಡೆಸಿಲ್ಲ. ಫೆ.2 ರಂದು ನಡೆದ ವಿಚಾರಣೆ ವೇಳೆ "ಬಿಬಿಎಂಪಿ ಆಯುಕ್ತರು ಪ್ರಕರಣದ ಬಗ್ಗೆ ವಹಿಸುತ್ತಿರುವ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ"ಎಂದಿರುವ ನ್ಯಾಯಾಲಯ ಕುಮಾರ್ ನಾಯಕ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಬೇಕೆಂದು ಆದೇಶ ನೀಡಿತ್ತು.
ಆದರೆ ಸರ್ಕಾರಿ ವಕೀಲ ಕೆ.ಎನ್ ಪುಟ್ಟೇಗೌಡ ಮನವಿ ಮಾಡಿದ ಹಿನ್ನೆಲೆಯಲ್ಲಿ ಆಯುಕ್ತರು ಬುಧವಾರದ ವಿಚಾರಣೆಗೆ ಹಾಜರಾದ ಬಳಿಕವೇ ಬಂಧನದ ಆದೇಶ ಹಿಂಪಡೆಯುವುದಾಗಿ ನ್ಯಾಯಾಲಯ ಹೇಳಿದೆ.