ಮಂಗಳೂರು: ದೇಶಾದ್ಯಂತ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ ಮಂಗಳೂರಿನ ಪುತ್ತೂರಿನ ಮುಸ್ಲಿಂ ವಿದ್ಯಾರ್ಥಿ ರಾಮಾಯಣ ಪರೀಕ್ಷೆಯಲ್ಲಿ ಶೇ. 93 ರಷ್ಟು ಅಂಕ ಪಡೆದು ಮೊದಲ ಸ್ಥಾನ ಗಳಿಸಿದ್ದಾಳೆ.
2015 ರ ನವೆಂಬರ್ ನಲ್ಲಿ ಪುತ್ತೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸಿದ ಪರೀಕ್ಷೆ ನಡೆಸಿತ್ತು. ಕೇರಳ -ಕರ್ನಾಟಕ ಗಡಿಭಾಗದಲ್ಲಿರುವ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಫಾತಿಮಾತ್ ರಾಹಿಲಾ ಅತಿ ಹೆಚ್ಚು ಅಂಕ ಪಡೆದು ಮೊದಲಿಗಳಾಗಿದ್ದಾಳೆ.
ಇಡೀ ರಾಜ್ಯಕ್ಕೆ ಪ್ರಥಮಳಾಗಿ ಅಂಕ ತೆಗೆಯಬೇಕು ಎಂದು ತುಂಬಾ ಕಷ್ಟ ಪಡುತ್ತಿದ್ದಳು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಫಾತಿಮಾತ್ ತಂದೆ ಇಬ್ರಾಹಿಂ ಹೇಳಿದ್ದಾರೆ. ಆಕೆ ರಾಮಾಯಣ ಮಹಾಭಾರತ ಪರೀಕ್ಷೆಗೆ ಆಕೆಯ ಚಿಕ್ಕಪ್ಪ ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರ್ವೋದಯ ಶಾಲೆಯಿಂದ ಸುಮಾರು 39 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ ಫಾತಿಮಾತ್ ಕೂಡ ಒಬ್ಬಳಾಗಿದ್ದಳು. 9ನೇ ತರಗತಿಯಲ್ಲಿ ಅಧ್ಯಯನ ನಡೆಸುತ್ತಿರುವ ಫಾತಿಮಾತ್ ಮುಂಬರುವ ಬೇಸಿಗೆ ರಜೆಯಲ್ಲಿ ಮಹಾಭಾರತ ಪರೀಕ್ಷೆ ಕೂಡ ಬರೆಯಲಿದ್ದಾಳಂತೆ.