ಬೆಂಗಳೂರು: ರಾಜ್ಯದ 15 ಜಿಲ್ಲೆಗಳಲ್ಲಿ ಇಂದು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಯಾವುದೇ ಅಹಿತಕರ ಘಟನೆಯ ವರದಿಯಾಗಿಲ್ಲ. ಎಲ್ಲೆಡೆ ಮಧ್ಯಾಹ್ನದವರೆಗೆ ಮಂದಗತಿಯಲ್ಲಿದ್ದ ಮತದಾನ ಸಂಜೆಯಾಗುತ್ತಿದ್ದಂತೆ ಚುರುಕುಗೊಂಡಿತು. ಲಭ್ಯ ಮಾಹಿತಿಯ ಪ್ರಕಾರ ಪ್ರಾಥಮಿಕ ಅಂದಾಜಿನಂತೆ ಜಿಲ್ಲಾವಾರು ಮತದಾನ ಪ್ರಮಾಣ ವಿವರ ಹೀಗಿದೆ:
ಬೆಂಗಳೂರು ಗ್ರಾಮಾಂತರ -ಶೇಕಡಾ 55
ರಾಮನಗರ-ಶೇಕಡಾ 63
ದಾವಣಗೆರೆ -ಶೇಕಡಾ 70
ಕೋಲಾರ -ಶೇಕಡಾ 55
ಚಿಕ್ಕಬಳ್ಳಾಪುರ -ಶೇ.75
ಬೆಳಗಾವಿ ಶೇಕಡಾ- 52.
ಗದಗ ಶೇಕಡಾ -50
ಉಳಿದ 15 ಜಿಲ್ಲೆಗಳಲ್ಲಿ ಈ ತಿಂಗಳ 20 ರಂದು 2ನೇ ಹಂತದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯುವುದು. ಈ ಕ್ಷೇತ್ರಗಳಲ್ಲಿ 18ನೇ ತಾರೀಖು ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಎರಡೂ ಹಂತಗಳ ಮತ ಎಣಿಕೆ 23 ರಂದು ನಡೆಯಲಿದೆ.
ಹೆಬ್ಬಾಳ, ಬೀದರ್ ಮತ್ತು ದೇವದುರ್ಗ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಬೆಳಿಗ್ಗೆ 7 ಕ್ಕೆ ಆರಂಭವಾದ ಮತದಾನ ̧ಸಂಜೆ 5ರವರೆಗೆ ಇತ್ತು. ಸರತಿ ಸಾಲಿನಲ್ಲಿದ್ದ ಮತದಾರರಿಗೆ ಅವಧಿ ಮುಗಿದ ನಂತರವೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಬೀದರ್ ಮತ್ತು ದೇವದುರ್ಗ ಕ್ಷೇತ್ರಗಳಲ್ಲಿ ಬಿರುಬಿಸಿಲಿನಿಂದಾಗಿ ಆರಂಭದಲ್ಲಿ ಮಂದಗತಿಯಲ್ಲಿದ್ದ ಮತದಾನ ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿತು. ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರಾಥಮಿಕ ವರದಿಯಂತೆ ಶೇಕಡಾವಾರು ಮತದಾನದ ವಿವರ ಹೀಗಿದೆ :
ಹೆಬ್ಬಾಳ ಶೇಕಡಾ 48 ರಿಂದ 49
ಬೀದರ್ ಶೇಕಡಾ 51
ದೇವದುರ್ಗ ಶೇಕಡಾ 65
ಈ ಮೂರೂ ಮತಕ್ಷೇತ್ರಗಳಲ್ಲಿ ಮತ ಎಣಿಕೆ 16ನೇ ತಾರೀಖಿನಂದು ನಡೆಯಲಿದ್ದು, ಅಗತ್ಯ ವ್ಯವಸ್ಥೆ ಮಾಡಲಾಗಿದೆ.