ನೆಲಮಂಗಲ: ಖಾಸಗಿ ಕಂಪನಿ ಉದ್ಯೋಗಿ ಹರೀಶ್ ಎಂಬಾತನ ಬೈಕ್ ಗೆ ಸಕ್ಕರೆ ಸಾಗಿಸುತ್ತಿದ್ದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಹರೀಶ್ ದೇಹ ಇಬ್ಭಾಗವಾಗಿ ನಡು ರಸ್ತೆಯಲ್ಲಿ ಬಿದ್ದಿದ್ದ ಘಟನೆ ನೆಲಮಂಗಲದ ತಿಪ್ಪಗೊಂಡನಹಳ್ಳಿ ಬಳಿ ನಡೆದಿದೆ.
ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡದ ಲಾರಿ ಹರೀಶ್ ಮೇಲೆ ಹರಿದಿದ್ದರಿಂದ ದೇಹ ಇಬ್ಭಾಗವಾಗಿ ನಡುರಸ್ತೆಯಲ್ಲಿ ಕಾಪಾಡಿ...ಕಾಪಾಡಿ... ಎಂದು ಕೂಗಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಸಾಯುತ್ತೇನೆ ಎಂದು ತಿಳಿದ ಹರೀಶ್ ಕಾಪಾಡಿ ಕಾಪಾಡಿ ಎನ್ನುತ್ತಾ ನನ್ನ ದೇಹದ ಅಂಗಾಂಗಗಳನ್ನು ದಾನ ಮಾಡುವಂತೆ ಸ್ಥಳದಲ್ಲಿ ನೆರೆದಿದ್ದ ಜನರಿಗೆ ಮನವಿ ಮಾಡಿದ. ಆದರೆ ಕೆಲ ಹೊತ್ತಿನಲ್ಲೇ ಹರೀಶ್ ಪ್ರಾಣಪಕ್ಷಿ ಹಾರಿಹೋಗಿದೆ. ಹರೀಶ್ ದೇಹ ಇಬ್ಭಾಗವಾಗಿದ್ದರಿಂದ ಜನರು ಭೀತರಾಗಿ ಆತನ ಬಳಿಗೆ ಹೋಗಲು ಹಿಂಜರಿದ್ದಾರೆ.
ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಿದ್ದ 28 ವರ್ಷದ ಹರೀಶ್ ಮತದಾನಕ್ಕೆಂದು ನಿನ್ನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕರೇಗೌಡನಹಳ್ಳಿಗೆ ತೆರಳಿದ್ದ ಇಂದು ಪಲ್ಸರ್ ಬೈಕ್ ನಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿದ್ದರು. ತಿಪ್ಪಗೊಂಡನಹಳ್ಳಿ ಬಳಿ ಬರುತ್ತಿದ್ದಂತೆ ಲಾರಿ ಆತನ ಮೇಲೆ ಹರಿದಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಹರೀಶ್ ನ ಕಣ್ಣುಗಳನ್ನು ನಾರಾಯಣ ನೇತ್ರಾಲಯ ಆಸ್ಪತ್ರೆಗೆ ದಾನ ಮಾಡಲಾಗಿದ್ದು. ದೇಹದ ಅಂಗಾಂಗಗಳನ್ನು ದಾನ ಮಾಡಿ ಹರೀಶ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.