ಬೆಂಗಳೂರು: ಕಸದ ಸಮಸ್ಯೆಯಿಂದ ಪದೇ ಪದೇ ಸದ್ದು ಮಾಡುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತ್ತೀಚೆಗೆ ಕಾರ್ಪೊರೇಟರ್‍ಗಳ ಜಗಳದಿಂದ ಸಾರ್ವಜನಿಕವಾಗಿ ಭಾರಿ ಸದ್ದು ಮಾಡುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಪಾಲಿಕೆ ಕಾಂಗ್ರೆಸ್ ಸದಸ್ಯ ಜಿ. ಕೆ.ವೆಂಕಟೇಶ್ ಅವರು, ಬಿಜೆಪಿ ಕಾರ್ಪೊರೇಟರ್ ಮಮತಾ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮತ್ತು ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. ಬಿಬಿಎಂಪಿ ಜೆ.ಪಿ.ಪಾರ್ಕ್ ವಾರ್ಡ್‍ನ ಸದಸ್ಯೆ ಮಮತಾ, ಅವರ ಪತಿ ಕೆ.ಟಿ.ವಾಸುದೇವ ಹಾಗೂ ಅವರ ಬೆಂಬಲಿಗ ಬಾಬು ಎಂಬುವವರಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆಯಿದೆ. ಆದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತಮ್ಮ
ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಜಿ.ಕೆ.ವೆಂಕಟೇಶ್ ದೂರಿನಲ್ಲಿ ಕೋರಿದ್ದಾರೆ.
ಡಿ.31ರಂದು ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಜೆ.ಪಿ.ಪಾರ್ಕ್ ಒತ್ತುವರಿ ವಿಚಾರವಾಗಿ ಜಿ.ಕೆ.ವೆಂಕಟೇಶ್ ಮತ್ತು ಮಮತಾ ನಡುವೆ ವಾಗ್ವಾದ ನಡೆದಿತ್ತು. ಇದುವೇ ದೊಡ್ಡ ವಿವಾದವಾಗಿದೆ.
`ಜೆ.ಪಿ.ಪಾರ್ಕ್‍ಗೆ ಸೇರಿದ ಜಾಗವನ್ನು ಮಮತಾ ಅವರ ಸಂಬಂಧಿಕರು ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳೂ ಇವೆ. ಈ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಮಮತಾ ಅವರು ಕೌನ್ಸಿಲ್ ಸಭೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದರು. ಅಂದು ಕೌನ್ಸಿಲ್ ಸಭೆಯಿಂದ ಹೊರಬಂದಾಗ ಮಮತಾ ಅವರ ಪತಿ ಕೆ.ಟಿ.ವಾಸುದೇವ, ಅವರ ಬೆಂಬಲಿಗ ಬಾಬು ತಮಗೆ ಪ್ರಾಣ ಬೆದರಿಕೆ ಹಾಕಿದ್ದರು.ಹಾಗಾಗಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ' ಎಂದು ಜಿ.ಕೆ. ವೆಂಕಟೇಶ್ ತಿಳಿಸಿದ್ದಾರೆ.
`ಮಮತಾ, ಅವರ ಪತಿ ಕೆ.ಟಿ.ವಾಸು ದೇವ, ಅವರ ಬೆಂಬಲಿಗ ಬಾಬು ವಿರುದ್ಧ ದೂರು ದಾಖಲಾಗಿದೆ. ದೂರಿನ ಸಂಬಂಧ ನ್ಯಾಯಾಲಯಕ್ಕೆ ಪತ್ರ ಬರೆದಿದ್ದು, ಅನುಮತಿ ದೊರೆತ ಕೂಡಲೇ ಎಫ್ಐಆರ್ ದಾಖಲಿಸ ಲಾಗುವುದೆಂದು' ಹಲಸೂರು ಗೇಟ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.