ಬೆಂಗಳೂರು: ಅದಮ್ಯ ಚೇತನ ಸಂಸ್ಥೆ ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ ಸೇವಾ ಉತ್ಸವ ಭಾನುವಾರ ವೈಭವೋಪೇತ ತೆರೆ ಕಂಡಿತು.
ಭಾನುವಾರ ನಡೆದ ಸಮಾರೋಪದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ ಅನಂತಕುಮಾರ್, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್, ಸಂಸದ ಹರೀಶ್ ದ್ವಿವೇದಿ ಇದ್ದರು.
ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ರಾಮ್ ರಾವ್, ಚಂದ್ರಶೇಖರಯ್ಯ, ಎಸ್.ಸಿ.ಶರ್ಮ, ಚಿನ್ನಸ್ವಾಮಿ, ರಾಮಲಿಂಗೇಗೌಡ, ದಿನೇಶ್ ಹೆಗಡೆ, ಜಯಶ್ರೀ, ನಂಜುಂಡಸ್ವಾಮಿ, ಹರೀಶ್, ಭಾರತೀಶ್, ಬಾಲಕೃಷ್ಣ ಮತ್ತಿತರರನ್ನು ಕೇಂದ್ರ ಸಚಿವರು ಸನ್ಮಾನಿಸಿದರು. ನಂತರ ಮಾತನಾಡಿದ ಸ್ಮೃತಿ ಇರಾನಿ, ಅದಮ್ಯ ಚೇತನ ಸಂಸ್ಥೆ ಬೆಂಗಳೂರು ಅಡುಗೆ ಮನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಪೆಟ್ರೋಲಿಯಂ ಉತ್ಪನ್ನ ಬಳಸದೇ ಆಹಾರ ಉತ್ಪಾದನೆ, ಅಡುಗೆ ಮನೆಯಿಂದ ಶೂನ್ಯ ಕಸ ಉತ್ಪಾದನೆ ಸಾಮಾನ್ಯ ವಿಷಯವೇನಲ್ಲ. ನೂತನ ತಂತ್ರಜ್ಞಾನ ಬಳಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ದೇಶದ ಪ್ರತಿ ಜಿಲ್ಲೆಯಲ್ಲಿಯೂ ಅದಮ್ಯ ಚೇತನ ಸಂಸ್ಥೆಯಂತಹ ಆಹಾರ, ಆರೋಗ್ಯ, ಶಿಕ್ಷಣದ ಸೇವೆ ನಡೆಸಬೇಕು ಎಂದು ತಿಳಿಸಿದರು.
ಯಶಸ್ವಿ ಉತ್ಸವ: ಡಿಸೆಂಬರ್ 31ರಿಂದ ಜನವರಿ 3ರವರೆಗೆ ನಡೆದ ಕಲಾ ಸಲಾಂ ಸೇವಾ ಉತ್ಸವದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ವೈಮಾನಿಕ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸಾಧನೆ ಬಿಂಬಿಸುವ ವಿಶೇಷ ಪ್ರದರ್ಶಿನಿ, ಹಸಿರು ಜೀವನ ಶೈಲಿ ಪ್ರದರ್ಶಿನಿ, ಅರ್ಥಪೂರ್ಣ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ವಿಶಿಷ್ಟ ಮಾರಾಟ ಮಳಿಗೆಗಳು ಗಮನ ಸೆಳೆದವು. ಹಾಗೆಯೇ ಹಸಿರು ಬೆಂಗಳೂರು 1-1 ಅಭಿಯಾನದ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಸಸಿಗಳನ್ನು ವಿತರಿಸಲಾಯಿತು.
ಪ್ರದರ್ಶಿನಿಯಲ್ಲಿ ಸ್ವತಃ ವಿಜ್ಞಾನಿಗಳೇ ತಮ್ಮ ಮಾದರಿಗಳು, ನಕ್ಷೆ ಹಾಗೂ ನೈಜ ಪ್ರಾತ್ಯಕ್ಷಿಕೆ ಮೂಲಕ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂಬ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರೇರೇಪಿಸುತ್ತಿದ್ದುದ್ದು, ವಿಶೇಷವಾಗಿತ್ತು. 10 ಸಾವಿರಕ್ಕೂ ಹೆಚ್ಚು ಜನರು ಏಕ ಕಂಠದಲ್ಲಿ ವಂದೇ ಮಾತರಂ ಪಠಿಸಿದ್ದು, ವಿಜ್ಞಾನಿಗಳಿಗೆ ಸನ್ಮಾನ ಮೇಳದ ವಿಶೇಷವಾಗಿತ್ತು.