ಆಗ್ನೇಯ ವಿಭಾಗದ ಪೊಲೀಸರ ಕಾರ್ಯಾಚರಣೆ 
ಜಿಲ್ಲಾ ಸುದ್ದಿ

ಮನೆ ಮುಂದೆ ಬಲೂನು ಮಾರಾಟ ಮಾಡುವವರ ಬಗ್ಗೆ ಇರಲಿ ಎಚ್ಚರ

ಇವರ ಹಗಲು ವೃತ್ತಿ ಬಲೂನು ಮಾರಾಟ, ದೇವರ ವಿಗ್ರಹ ಹೊತ್ತು ಭಿಕ್ಷೆ ಬೇಡುವುದು. ಪ್ರವೃತ್ತಿ ಪಕ್ಕಾ ಕಳ್ಳತನ. ಆದರೆ, ಇವರು ಸುಮ್ಮನೆ ಕಳ್ಳತನ ಮಾಡುತ್ತಿರಲಿಲ್ಲ....

ಬೆಂಗಳೂರು: ಇವರ ಹಗಲು ವೃತ್ತಿ ಬಲೂನು ಮಾರಾಟ, ದೇವರ ವಿಗ್ರಹ ಹೊತ್ತು ಭಿಕ್ಷೆ ಬೇಡುವುದು. ಪ್ರವೃತ್ತಿ ಪಕ್ಕಾ ಕಳ್ಳತನ. ಆದರೆ, ಇವರು ಸುಮ್ಮನೆ ಕಳ್ಳತನ ಮಾಡುತ್ತಿರಲಿಲ್ಲ. ಬಲೂನು, ದೇವರವಿಗ್ರಹ ಮಾರಾಟಕ್ಕೆಂದು ಹೋದಾಗ ಕಂಡ ಒಂಟಿ ಮನೆ, ಬೀಗ ಹಾಕಿದ ಮನೆ ಹಾಗೂ ದೊಡ್ಡ ಕಿಟಕಿ ಹೊಂದಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು.ನಂತರ ಮಧ್ಯರಾತ್ರಿ ಅದೇ ಮನೆಗೆ ಹೋಗಿ ನಗದು, ಚಿನ್ನಾಭರಣ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ದೋಚಿ ಪರಾರಿಯಾಗುತ್ತಿದ್ದರು.

ಒಟ್ಟು ಏಳು ಮಂದಿ ಇರುವ ಈ ತಂಡದ ಹೆಸರೇ ಪಾರ್ಥಿ! ಈ ತಂಡದ ಎಲ್ಲ ಸದಸ್ಯರನ್ನು ಆಗ್ನೇಯ ವಿಭಾಗ ಪೊಲೀಸರ ವಿಶೇಷ ತಂಡ ಬಂಧಿಸಿದ್ದಾರೆ. ಅಷ್ಟೇ ಅಲ್ಲ, ಆರೋಪಿಗಳಿಂದ ರು. 35 ಲಕ್ಷ ಮೌಲ್ಯದ 1.248 ಕೆ.ಜಿ ಚಿನ್ನಾಭರಣ ಮತ್ತು 2.685 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಮೂಲದ ರಣಬೀರ್ ಸಿಂಗ್ (32), ರಾಂಬಾಬು (27), ಧರ್ಮ (25), ಮುರಗೇಶ (50), „ೀರಜ್ (32), ಬೀರು (22) ಹಾಗೂ ದೇವೇಂದ್ರ ಸೋನಿ(38) ಬಂಧಿತರು. ಆರೋಪಿಗಳ ಬಂಧನದಿಂದ ವಿವಿಧ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 13 ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಆಗ್ನೇಯ ವಿಭಾದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಸೇರಿದಂತೆ ಪಂಜಾಬ್, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಪಾರ್ಥಿ ತಂಡದ ಸದಸ್ಯರು ಸಕ್ರಿಯರಾಗಿದ್ದಾರೆ. ಇವರು ರಾಜ್ಯಗಳ ಆಯಾಯ ಪ್ರಮುಖ ನಗರಗಳ ಶಿಥಿಲಗೊಂಡ ಪಾಳು ಮನೆ, ಮೇಲ್ಸೇತುವೆ, ರಸ್ತೆ ಜಂಕ್ಷನ್, ಅಂಗಡಿ ಮುಂಗಟ್ಟುಗಳ ಜಗಲಿಗಳಲ್ಲಿ ವಾಸ ಮಾಡುತ್ತಾರೆ. ಬಲೂನು ಮಾರಾಟ, ದೇವರ ವಿಗ್ರಹ ಹೊತ್ತು ಭಿಕ್ಷೆ ಬೇಡುವ ನೆಪದಲ್ಲಿ ಹಗಲು ಬೀದಿ ಬೀದಿ ಅಲೆಯುತ್ತಾರೆ. ಈ ವೇಳೆಯೇ ಮನೆಗಳನ್ನು ಗುರುತಿಸಿಕೊಂಡು ಕಳ್ಳತನ ಮಾಡುತ್ತಾರೆ ಎಂದು ಆರೋಪಿಗಳ ಕಳ್ಳತನ ಮಾರ್ಗದ ರಹಸ್ಯ ಬಿಚ್ಚಿಟ್ಟರು.

ಮಧ್ಯಪ್ರದೇಶದಲ್ಲಿ ಮಾರಾಟ
: ಆರೋಪಿಗಳು ನಾನಾ ರಾಜ್ಯಗಳಲ್ಲಿ ಮನೆಗಳವು ಮಾಡುತ್ತಿದ್ದರು. ಕದ್ದ ಆಭರಣಗಳನ್ನು ಮಧ್ಯಪ್ರದೇಶಕ್ಕೆ ಕೊಂಡೊಯ್ದು ಮಾರುತ್ತಿದ್ದರು. ಕದ್ದ ಆಭರಣಗಳನ್ನು ಪಡೆದು ಹಣ ನೀಡುವ ಅಂಗಡಿಗಳ ದೊಡ್ಡ ಜಾಲವೇ ಮಧ್ಯಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆರೋಪಿಗಳು ಎಲ್ಲಿಯೇ ಕಳ್ಳತನ ಮಾಡಲಿ, ಅದನ್ನು ಮಧ್ಯಪ್ರದೇಶದ ಅಂಗಡಿಗೆ ಮಾರಿ, ಹಣ ಪಡೆಯುತ್ತಿದ್ದರು ಎಂದು ಪಿ.ಹರಿಶೇಖರನ್ ವಿವರಿಸಿದರು.

ಇತ್ತೀಚೆಗೆ ಆಗ್ನೇಯ ವಿಭಾಗದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ಆರೋಪಿಗಳ ಪತ್ತೆಗೆ ಎಸಿಪಿ ದುಗ್ಗಪ್ಪ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ನಗರದ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಪಾರ್ಥಿ ತಂಡದ ಏಳು ಮಂದಿ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಮನೆಗಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇವರು ನೀಡಿರುವ ಮಾಹಿತಿ ಮೇರೆಗೆ ಮಧ್ಯಪ್ರದೇಶದಲ್ಲಿ ಸಕ್ರಿಯರಾಗಿರುವ ತಂಡದ ಸದಸ್ಯರನ್ನು ಬಂಧಿಸಲು ಪೊಲೀಸರ ವಿಶೇಷ ತಂಡವೊಂದು ಶೀಘ್ರದಲ್ಲೇ ಅಲ್ಲಿಗೆ ತೆರಳಲಿದೆ ಎಂದು ತಿಳಿಸಿದರು. ಹಿಂದೆ ನಡೆದಿದ್ದ ಮನೆಗಳವು ಪ್ರಕರಣ ಸಂಬಂಧಪಟ್ಟ ಸಿಸಿಟಿವಿ ಪರಿಶೀಲಿಸುವಾಗ ಇದರಲ್ಲಿ ಬಂಧಿತ ಇಬ್ಬರು ಆರೋಪಿಗಳ ಚಹರೆ ಪತ್ತೆಯಾಗಿದೆ. ಆಯಾಯ ರಾಜ್ಯಗಳ ಪೊಲೀಸರನ್ನು ಸಂಪರ್ಕಿಸಿದಾಗ ದೊರೆತ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಹೇಳಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!