ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಯಾರಾಗುವರು ಲೋಕಾಯುಕ್ತ?

ರಾಜ್ಯ ಲೋಕಾಯುಕ್ತರ ನೇಮಕ ಅಂತಿಮ ಹಂತ ತಲು ಪಿದೆ, ನ್ಯಾ. ವಿಕ್ರಮ್ ಜಿತ್ ಸೇನ್ ಅಥವಾ ನ್ಯಾ.ಎಸ್.ಆರ್. ನಾಯಕ್...

ಸಾಂದರ್ಭಿಕ ಚಿತ್ರ
Mainashree
Updated On : 5 Jan 2016, 11:08 am
ಬೆಂಗಳೂರು: ರಾಜ್ಯ ಲೋಕಾಯುಕ್ತರ ನೇಮಕ ಅಂತಿಮ ಹಂತ ತಲು ಪಿದೆ, ನ್ಯಾ. ವಿಕ್ರಮ್ ಜಿತ್ ಸೇನ್ ಅಥವಾ ನ್ಯಾ.ಎಸ್.ಆರ್. ನಾಯಕ್ ಇವರಿಬ್ಬರಲ್ಲಿ ಮುಂದಿನ ಲೋಕಾಯುಕ್ತ ಯಾರು ಎಂಬುದಕ್ಕೆ ಮಂಗಳವಾರ ಸ್ಪಷ್ಟ ಚಿತ್ರಣ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಇಬ್ಬರ ಪೈಕಿ ಒಬ್ಬರ ಹೆಸರನ್ನು ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳುಹಿಸಲಿದ್ದಾರೆ. 
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ವಿಪಕ್ಷ ಬಿಜೆಪಿ ನ್ಯಾ.ವಿಕ್ರಮ್ ಜಿತ್ ಸೇನ್ ಪರ ಒಲವು ತೋರಿದ್ದರೆ, ಆಡಳಿತ ಪಕ್ಷ ನ್ಯಾ. ಎಸ್.ಆರ್.ನಾಯಕ್ ಪರ ಒಲವು ತೋರಿದೆ. ಹೀಗಾಗಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಹಿಂದ ಪರ ಆಲೋಚನೆ ಹಿನ್ನೆಲೆಯಲ್ಲಿ ನ್ಯಾ.ಎಸ್. ಆರ್.ನಾಯಕ್ ಅವರನ್ನು ಆಯ್ಕೆ ಮಾಡಿದರೆ ಹೇಗೆ ಎನ್ನುವ ಲೆಕ್ಕಾಚಾರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. 
ಈ ಚಿಂತನೆ ಮಂಗಳವಾರದವರೆಗೂ ಮುಂದುವರಿಯಲಿದ್ದು, ಸಿದ್ದರಾಮಯ್ಯ ಮಧ್ಯಾಹ್ನದ ವೇಳೆಗೆ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲಿದ್ದಾರೆ. ಆದರೆ, ಸಭೆಯಲ್ಲಿದ್ದ ಬಹುತೇಕರು ನ್ಯಾ.ವಿಕ್ರಮ್ ಜಿತ್ ಸೇನ್ ಅವರನ್ನೇ ನೇಮಿಸುವಂತೆ ಒತ್ತಾಯಿಸಿದ್ದಾರೆ. ಸ್ಥಳೀಯರಿಗೆ ಆದ್ಯತೆ ಕೊಡಬೇಕೆಂಬ ಅಂಶ ಪರಿಗಣಿಸಿ ಕೊನೆ ಕ್ಷಣದಲ್ಲಿ ಸಿಎಂ ನಿಲುವು ಬದಲಿಸಿ ನ್ಯಾ.ಎಸ್.ಆರ್.ನಾಯಕ್‍ರ ಹೆಸರು ಶಿಫಾರಸು ಮಾಡಿದರೂ ಅಚ್ಚರಿ ಇಲ್ಲ. 

Advertisement

Advertisement

ನಡೆದಿದ್ದೇನು ?: ಕುಮಾರಕೃಪಾ ಅತಿಥಿ ಗೃಹ ದಲ್ಲಿ ನಡೆದ ಸಭೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಿದ್ದರಾಮಯ್ಯ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಖರ್ಜಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂತಿರ್ , ಪ್ರತಿಪಕ್ಷ ನಾಯಕ ಈಶ್ವರಪ್ಪ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಭಾಗವಹಿಸಿದ್ದರು. 
ಸಭೆ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಉದ್ದೇಶದ ವಿಷಯ ಪ್ರಸ್ತಾಪಿಸಿದರು. ಆಗ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನ್ಯಾ.ವಿಕ್ರಮ್ ಜಿತ್ ಸೆನ್ ಮತ್ತು ನ್ಯಾ.ಎನ್. ಕೆ.ಪಾಟೀಲ್ ಅವರನ್ನು ಲೋಕಾಯುಕ್ತ ಹುದ್ದೆಗೆ ಹೆಸರಿಸಿದರು. ಅದಕ್ಕೆ ಈಶ್ವರಪ್ಪ ಈಶ್ವರಪ್ಪ ಮತ್ತು ಡಿ.ಶಂಕರಮೂರ್ತಿ ಕೂಡ ದನಿಗೂಡಿಸಿದರು. ಅದನ್ನೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಕೂಡ ಪ್ರಸ್ತಾಪಿಸಿ ಅನುಮೋದಿಸುವಂತೆ ಮಾತನಾಡಿದರು. 
ಆಗ ಸ್ಪೀಕರ್ ಕಾಗೋಡು ತಿಮ್ಮಪ್ಪ ನ್ಯಾ.ಎಸ್.ಆರ್.ನಾಯಕ್ ಹೆಸರು ಪ್ರಸ್ತಾಪಿಸಿದರು. ಅದಕ್ಕೆ ಜಗದೀಶ್ ಶೆಟ್ಟರ್ ಆಕ್ಷೇಪಿಸಿದರು. ಎಸ್ ಆರ್ ನಾಯಕ್ ವಿರುದ್ಧ ಆರೋಪಗಳಿವೆ. ಅದು ಸರಿಯಲ್ಲ ಎಂದರು. ಇದರಿಂದ ಬೇಸರಗೊಂಡ ಸಿದ್ದರಾಮಯ್ಯ, ಆರೋಪಗಳು ಸಹಜ. ಇತ್ತೀಚಿನ ದಿನಗಳಲ್ಲಿ ಅದು ಸಾಮಾನ್ಯವಾಗಿ ಬಿಟ್ಟಿದೆ ಎಂದರು. ಅಂತಿಮವಾಗಿ ವಿಕ್ರಮ್ ಜಿತ್ ಸೆನ್ ಅಥವಾ ನ್ಯಾ.ಎಸ್ ಆರ್ ನಾಯಕ್ ಅವರನ್ನು ಯಾರನ್ನು ಆಯ್ಕೆ ಮಾಡಬೇಕೆನ್ನುವ ಅಧಿಕಾರವನ್ನು ಮುಖ್ಯಮಂತ್ರಿ ನಿರ್ಧರಿಸುವಂತೆ ಸಲಹೆ ನೀಡಲಾಯಿತು. 
ರಾಜ್ಯಪಾಲರ ನಡೆ ಏನು?: ಲೋಕಾಯುಕ್ತರಾಗಿದ್ದ ನ್ಯಾ. ವೈ.ಭಾಸ್ಕರ್ ಅವರು ಡಿಸೆಂಬರ್ 9 ರಂದು ರಾಜಿನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಹೊಸ ಲೋಕಾಯುಕ್ತರ ನೇಮಕ ಪ್ರಕ್ರಿಯೆ ನಡೆದಿದೆ. ಒಂದು ವೇಳೆ ರಾಜ್ಯ ಸರ್ಕಾರ ಎಸ್. ಆರ್.ನಾಯಕ್ ಅವರ ಹೆಸರನ್ನು ಶಿಫಾರಸು ಮಾಡಿದರೆ ರಾಜ್ಯಪಾಲರು ಅವರ ಹೆಸರನ್ನು ಒಪ್ಪದೇ ತಿರಸ್ಕರಿಸಬಹುದು. 
ಈಗಾಗಲೇ ಉಪ ಲೋಕಾಯುಕ್ತ ಹುದ್ದೆಗೆ 3 ಸಲ ನ್ಯಾ.ಕೆ.ಎಲ್. ಮಂಜುನಾಥ್ ಅವರನ್ನು ಹೆಸರನ್ನು ಸರ್ಕಾರ ಶಿಫಾರಸು ಮಾಡಿದ್ದರೂ ಒಪ್ಪದೇ ತಿರಸ್ಕರಿಸಿದ್ದರು. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ರಾಜ್ಯ ಸರ್ಕಾರ ಅಂತಿಮವಾಗಿ ಉಪ ಲೋಕಾಯುಕ್ತ ಹುದ್ದೆಗೆ ನ್ಯಾ.ಆನಂದ್ ಅವರ ಹೆಸರನ್ನು ಶಿಫಾರಸು ಮಾಡಿತು.
ಈಗಲೂ ಸಹ ರಾಜ್ಯ ಸರ್ಕಾರ ಶಿಫಾರಸು ಮಾಡುವ ಹೆಸರನ್ನು ರಾಜ್ಯಪಾಲರು ಒಪ್ಪದೇ ಇರಬಹುದು. ಒಂದು ವೇಳೆ ಆ ರೀತಿಯ ಬೆಳವಣಿಗೆಗಳು ನಡೆದರೆ ಸರ್ಕಾರ ಮುಜುಗರಕ್ಕೆ ಒಳಪಡಲಿದೆ. ರಾಜ್ಯ ಸರ್ಕಾರ ತನಗಿಷ್ಟವಾದ ಹೆಸರನ್ನು ಶಿಫಾರಸು ಮಾಡಲಿದೆ. ಅದಕ್ಕೆ ರಾಜ್ಯ-ಪಾಲರು ಒಪ್ಪಿದರೆ ಎಲ್ಲವೂ ಸುಸೂತ್ರವಾಗಿ ನಡೆಯ-ಲಿವೆ. ಒಂದು ವೇಳೆ ಶಿಫಾರಸು ತಿರಸ್ಕರಿಸಿದರೆ ಲೋಕಾಯುಕ್ತರ ಆಯ್ಕೆಗೆ ಮತ್ತೆ ಕಗ್ಗಂಟು ಸೃಷ್ಟಿಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement