ಬೆಂಗಳೂರು: ಕಾವೇರಿ ನದಿ ಉಗಮದಿಂದ ಅಂತ್ಯದ ವರೆಗಿನ ನದಿ ಪಾತ್ರದ ಸಮಗ್ರ ಚಿತ್ರಣ ಪರಿಚಯ ಮಾಡಿಕೊಡುವ ವಿಶಿಷ್ಟ ಗ್ಯಾಲರಿಯೊಂದನ್ನು(ಕಾವೇರಿ ರಿವರ್ ಗ್ಯಾಲರಿ) ಮೈಸೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.
ಜೀವನದಿ ಕಾವೇರಿಯ ಇತಿಹಾಸ, ಮಹತ್ವ, ಪಾವಿತ್ರತೆ ಹಾಗೂ ನದಿಯಿಂದ ಆಗಿರುವ ಲಾಭ, ನದಿಗೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅಪಾಯ ಸೇರಿದಂತೆ ಅನೇಕ ಸಮಗ್ರ ವಿಚಾರಗಳನ್ನು ಒಳಗೊಂಡ ಗ್ಯಾಲರಿಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ಥಾಪಿಸಲಾಗುತ್ತದೆ. ಇದನ್ನು ಉತ್ತಮ ಪ್ರವಾಸಿ ತಾಣವನ್ನಾಗಿ ರೂಪಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಈ ಸಂಬಂಧ ಭಾರತೀಯ ವಿಜ್ಞಾನ ವಸ್ತು ಸಂಗ್ರಹಾಲಯ ಅಕಾಡೆಮಿ ಹಾಗೂ ಪ್ರವಾಸೋದ್ಯಮ ಇಲಾಖೆ ನಡುವೆ ಬುಧವಾರ ಒಡಂಬಡಿಕೆ ನಡೆದಿದೆ. ಒಪ್ಪಂದದ ನಂತರ ಮಾತನಾಡಿದ ಸಚಿವ ದೇಶಪಾಂಡೆ, ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿ, ವಾರಾಣಸಿಯಲ್ಲಿ ಗಂಗಾ ನದಿ ಗ್ಯಾಲರಿಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿ ಕಾವೇರಿ ನದಿ ಗ್ಯಾಲರಿಯಲ್ಲಿ ಕಲಾ ತಾಂತ್ರಿಕತೆಯನ್ನು ಬಳಸಿಕೊಂಡು ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಕಾವೇರಿ ನದಿ ಪಾತ್ರದ ಸಮಗ್ರ ನೈಜ ಚಿತ್ರಣ ಕಟ್ಟಿಕೊಡಲಾಗುವುದು ಎಂದರು.