ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ ಭ್ರಷ್ಟರನ್ನು ನೇಮಿಸಿ ಹಾಳುಗೆಡವಿದ ಬಿಜೆಪಿ ಈಗ ಮತ್ತೊಮ್ಮೆ ಲೋಕಾಯುಕ್ತ ನೇಮಕ ಸಂಬಂಧಿತ ಚರ್ಚೆಯನ್ನು ಗೌಪ್ಯವಾಗಿಡದೆ ತನ್ನ ಗೋಸುಂಬೆತನ ಪ್ರದರ್ಶಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ಟೀಕಾ ಪ್ರಹಾರ ನಡೆಸಿದ್ದಾರೆ.
ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಹೈ ಕೋರ್ಟ್ ಹಂಗಾಮಿ ಸಿಜೆ, ಸಭಾಪತಿ, ಸಭಾಧ್ಯಕ್ಷರು ಹಾಗೂ ಉಭಯ ಸದನಗಳ ಪ್ರತಿ ಪಕ್ಷ ನಾಯಕರ ಸಭೆ ನಡೆದು ಇಬ್ಬರ ಹೆಸರನ್ನು ಸೂಚಿಸಲಾಯಿತು. ಇಲ್ಲಿ ಮುಖ್ಯಮಂತ್ರಿ ಹೊರತುಪಡಿಸಿ ಉಳಿದವರು ಅಭಿಪ್ರಾಯ ಸೂಚಿಸಬಹುದೇ ವಿನಾ ನಿರ್ಧಾರ ಹೇರುವುದಿಲ್ಲ, ಲೋಕಾಯುಕ್ತ ಹುದ್ದೆಗೆ ನೇಮಿಸುವ ಪರಮಾಧಿಕಾರ ಮುಖ್ಯಮಂತ್ರಿಗೆ ಇರುತ್ತದೆ. ಆದರೆ ಬಿಜೆಪಿ 2013 ರಲ್ಲಿ ಭಾಸ್ಕರ್ ರಾವ್ ನೇಮಿಸಿ ಸಂಸ್ಥೆಯನ್ನು ಹಾಳು ಮಾಡಿದಂತೆ ಈಗಲೂ ತನ್ನ ಹೊಣೆಗೇಡಿತನ ಪ್ರದರ್ಶಿಸುತ್ತಿದೆ ಎಂದು ಜರಿದರು.
ಈಗಾಗಲೇ ಹಾಳಾಗಿರುವ ಲೋಕಾಯಕ್ತ ಸಂಸ್ಥೆಯನ್ನು ಸರಿದಾರಿಗೆ ತರಲು ಮುಖ್ಯಮಂತ್ರಿಗಳು ಪಾರದರ್ಶಕ ನಡೆಯನ್ನು ಅನುಸರಿಸುತ್ತಿದ್ದಾರೆ, ಇದನ್ನು ಬೆಂಬಲಿಸದ ಬಿಜೆಪಿ ಈ ನೆಲದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರಾಜಕೀಯ ದುರುದ್ದೇಶದಿಂದ ಪದೇ ಪದೇ ಧ್ವೇಷ ಸಾಧಿಸುತ್ತಿದೆ ಹೀಗಾದರೇ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಲೋಕಾಯುಕ್ತ ಹುದ್ದೆಗೆ ಯಾವುದೇ ನ್ಯಾಯಮೂರ್ತಿ ಬರಲು ಹಿಂದೆ ಮುಂದೆ ನೋಡುತ್ತಾರೆ. ಹಾಗಾಗಿ ಬಿಜೆಪಿ ಈ ವಿಚಾರವನ್ನು ಹಾದಿ ಬೀದಿಯಾಗಿ ಚರ್ಚಿಸದೇ ಸರ್ಕಾರದ ಮಟ್ಟದಲ್ಲಿ ಗೌಪ್ಯತೆ ಕಾಪಾಡಿಕೊಳ್ಳಬೇಕು ಎಂದು ಉಗ್ರಪ್ಪ ಸಲಹೆ ನೀಡಿದರು.