ಬೆಂಗಳೂರು: ಕೈಮಗ್ಗ ಬಟ್ಟೆಗಳು ಹಾಗೂ ಆಹಾರ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ `ಸಖಿ ಉತ್ಸವ' ಎಂಬ ಸಂಚಾರಿ ಮಾರಾಟ ಮಳಿಗೆ ಆರಂಭಿಸಿದೆ. ಮೊಣಕಾಲ್ಮೂರು, ಶಿಗ್ಲಿ, ಇಳಕಲ್‍ಗಳಲ್ಲಿ ಸ್ವ ಸಹಾಯ ಮಹಿಳಾ ಗುಂಪುಗಳು ತಯಾರಿಸಿದ ಗುಣಮಟ್ಟದ ಸಾಂಪ್ರದಾಯಿಕ ನೇಯ್ಗೆ ಸೀರೆಗಳು, ಖಾದಿ ಬಟ್ಟೆಗಳು ಮತ್ತು ಗ್ರಾಮೀಣ ಮಹಿಳೆಯರು ತಯಾರಿಸುವ ಉತ್ಕೃಷ್ಟ ಆಹಾರ ಉತ್ಪನ್ನಗಳನ್ನು ಗ್ರಾಹಕರ ಬಳಿಗೆ ಕೊಂಡೊಯ್ಯಲು ಡಿಡಿಡಿ. homemadeonline.in ಆನ್‍ಲೈನ್ ಸಹಕಾರದೊಂದಿಗೆ ಸಖಿ ಉತ್ಸವ ಸಿದ್ಧವಾಗಿದೆ.
ದಕ್ಷಿಣ ಕನ್ನಡ, ಹಾವೇರಿ, ಹುಬ್ಬಳ್ಳಿ-ಧಾರವಾಡಗಳಲ್ಲಿ 10 ಉತ್ಪಾದನಾ ಘಟಕಗಳಲ್ಲಿ 400 ಮಂದಿ ಮಹಿಳೆಯರು ಸಿದ್ಧ ಉಡುಪು ತಯಾರಿಕೆಯಲ್ಲಿ ತೊಡಗಿದ್ದಾರೆ. ಫಾರ್ಮಲ್ ಷರ್ಟ್, ಕ್ಯಾಷುವಲ್ ಶರ್ಟ್, ಜುಬ್ಬಾ, ಮಳೆಯರು ಮತ್ತು ಮಕ್ಕಳ ಉಡುಪುಗಳನ್ನು ತಯಾರಿಸಿ `ಸಿರಿ' ಬ್ರಾಂಡ್‍ನಲ್ಲಿ ಮಾರಲಾಗುತ್ತಿ ದೆ. ಉಪ್ಪಿನಕಾಯಿ, ಮಕ್ಕಳ ಆಹಾರ, ಕುರುಕಲು ತಿಂಡಿ, ಜ್ಯೂಸ್ ಮೊದಲಾದ ಆಹಾರ ಉತ್ಪನ್ನಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿದ್ಧವಾಗುವ ಪರಿಶುದ್ಧ ಜೇನು, ತೆಂಗಿನ ಎಣ್ಣೆ, ಸುಗಂಧಿತ ಅಗರಬತ್ತಿ, ಲ್ಯಾಪ್‍ಟಾಪ್ ಬ್ಯಾಗ್, ಶಾಲಾ ಬ್ಯಾಗ್‍ಗಳು ಮತ್ತು ಅಡಿಕೆ ಹಾಳೆ ತಟ್ಟೆಗಳನ್ನು ತಯಾರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಸಿರಿ ಗ್ರಾಮೋದ್ಯೋಗದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಮನೋರಮಾ ಭಟ್, ಹೋಮ್ ಮೇಡ್ ಆನ್‍ಲೈನ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕಿ ಅಜಂತಾ ಚಂದನ್, ಡಿ.ಸುರೇಂದ್ರ ಕುಮಾರ್, ಶ್ರದ್ಧಾ, ಕನ್ನಡ ಚಿತ್ರ ನಟಿ ನೇಹಾ ಸಕ್ಸೇನಾ ಹಾಜರಿದ್ದರು.