ಬೆಂಗಳೂರು: ಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲಿಚ್ಛಿಸುವವರು ಪ್ರಾಥಮಿಕ ಸದಸ್ಯತ್ವ ಹೊಂದಿರಬೇಕು ಹಾಗೂ ಕನಿಷ್ಠ 3 ಸಾವಿರ ಸದಸ್ಯತ್ವ ಮಾಡಿಸಿರಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಾಕೀತು ಮಾಡಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತಮ್ಮ ಮನೆಯಲ್ಲಿ ಬಿ ಫಾರಂ ಇರುತ್ತೆ. ಯಾರು ಪಕ್ಷಕ್ಕೆ ಹೆಚ್ಚಿನ ಸದಸ್ಯರನ್ನು ಕರೆತರುತ್ತಾರೋ ಅಂತವರಿಗೆ ಇಲ್ಲಿಯೇ ಬಿ ಫಾರಂ ನೀಡುತ್ತೇನೆ. ಆಯಾ ಜಿಲ್ಲಾ ಘಟಕದ ಪದಾಧಿಕಾರಿಗಳು ಉತ್ತಮರ ಹೆಸರನ್ನು ಸೂಚಿಸಿ, ಕಳುಹಿಸಬೇಕು. ಅಲ್ಲಿನ ಮಾಜಿ, ಹಾಲಿ ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುವುದು ಎಂದರು.
ಈ ಚುನಾವಣೆಯಲ್ಲಿ ಜಿಪಂ, ತಾಪಂನ ಅಧಿಕಾರ ಹಿಡಿಯಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಕೋಲಾರದಲ್ಲಿ ಇಬ್ಬರು ಶಾಸಕರಿದ್ದು ಅವರೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುವರು ಎಂದರು.
ಕಾಶೆಂಪೂರ್ ಸ್ಪರ್ಧಿಸಲ್ಲ: ಎಚ್ ಡಿ ಕುಮಾರಸ್ವಾಮಿ
ಬೀದರ್ ಕ್ಷೇತ್ರದಿಂದ ಬಂಡೆಪ್ಪ ಕಾಶೆಂಪೂರ್ ನಿಲ್ಲುವುದಿಲ್ಲ. ಬದಲಾಗಿ ಹೆಬ್ಬಾಳ ಮತ್ತು ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಅವರ ಹೆಸರನ್ನು ಸೋಮವಾರ ಪ್ರಕಟಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ರೈತರ ಸರಣಿ ಸಾವಿನ ಹಿನ್ನೆಲೆಯಲ್ಲಿ ಈ ಉಪ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿತ್ತು. ಆದರೆ ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆಯಾದ್ದರಿಂದ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. ದೇವದುರ್ಗದಲ್ಲಿ ಜೆಡಿಎಸ್ ಗೆ ಬಲಿಷ್ಠವಾದ ನೆಲೆಯಿದೆ. ಕಳೆದ ಎರಡು ಚುನಾವಣೆಗಳನ್ನು ಹೊರತುಪಡಿಸಿದರೆ ಮಿಕ್ಕ ಚುನಾವಣೆಗಳಲ್ಲಿ ಜೆಡಿಎಸ್ ಗೆದ್ದಿದೆ. ಆ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಅಪಾರವಾಗಿದೆ. ಉತ್ಸಾಹ ಕೊರತೆಯಿಂದಾಗಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂಬ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಹಾಗೆಯೇ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.