ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಜಾಹೀರಾತು ವಿಭಾಗದಲ್ಲಿ ನಡೆದಿದೆ ಎನ್ನಲಾಗುತ್ತಿರುವ 2 ಸಾವಿರ ಕೋಟಿ ರುಪಾಯಿ ಹಗರಣವನ್ನು ಬುಧವಾರ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.
ಅನಧಿಕೃತ ಜಾಹೀರಾತು ಫಲಕಗಳನ್ನು ದಂಡ ವಸೂಲಿ ಮಾಡದೆ ತೆರವು ಮಾಡುತ್ತಿರುವ ಕಾರಣ ಒಂದೆಡೆ ಬಿಬಿಎಂಪಿಗೆ ₹ 2,000 ಕೋಟಿಯಷ್ಟು ವರಮಾನ ಸೋರಿಕೆಯಾದರೆ, ಇನ್ನೊಂದೆಡೆ ಹೊಸ ಫಲಕ ಹಾಕಲು ಜಾಹೀರಾತು ಮಾಫಿಯಾಕ್ಕೆ ಅಧಿಕೃತ ಅವಕಾಶ ಸಿಕ್ಕಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರವಣನ್ನು ಸಿಬಿಐಡಿಗೆ ವಹಿಸಿದ್ದು, ಕಳೆದ ಎಂಟು ವರ್ಷಗಳಲ್ಲಿ ನಡೆದ ಜಾಹೀರಾತು ಅಕ್ರಮದ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಲು 2008ರ ಜುಲೈ 25ರಂದು ನಿರ್ಣಯ ಕೈಗೊಳ್ಳಲಾಗಿತ್ತು. ಆಗಿನಿಂದಲೇ ಶುಲ್ಕ ವಸೂಲಿ ನಿಲ್ಲಿಸಲಾಗಿತ್ತು. ಫಲಕಗಳನ್ನು ತೆರವು ಮಾಡಬೇಕಿದ್ದ ಜಾಹೀರಾತು ಏಜೆನ್ಸಿಗಳು ಆಗಿನಿಂದಲೂ ಅನಧಿಕೃತವಾಗಿ ಪ್ರದರ್ಶಿಸುತ್ತಲೇ ಬಂದಿವೆ.