ಬೆಂಗಳೂರು: ರಾಜ್ಯ ಆರೋಗ್ಯ ಕವಚ(108) ನೌಕರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಜಿವಿಕೆ ಸಂಸ್ಥೆಯ ನಡವಳಿಕೆಗೆ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ ಬಿಕ್ಕಟ್ಟು ಬಗೆಹರಿಸುವಂತೆಯೂ ತಾಕೀತು ಮಾಡಿದೆ. ಈ ಮಧ್ಯೆ ಷರತ್ತುಗಳನ್ನು ರದ್ದುಪಡಿಸುವ ತನಕ ಹೋರಾಟ ಹಿಂಪಡೆಯುವುದಿಲ್ಲ ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಕಾರ್ಮಿಕ ಇಲಾಖೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಕಾರ್ಮಿಕ ಜಂಟಿ ಆಯುಕ್ತ ಶ್ರೀನಿವಾಸ್ ಅವರು ಜಿವಿಕೆ ಸಂಸ್ಥೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಎಸ್ಮಾ ಜಾರಿಗೊಳಿಸುವ ಮೊದಲೇ ಷರತ್ತುಗಳನ್ನು ವಿಧಿಸುವುದು ಕಾನೂನು ಬಾಹಿರವಾಗಿದ್ದು, ಇದರ ಪರಿಣಾಮವನ್ನು ಸಂಸ್ಥೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ನೀಡಿದ ನಿಯಮಾವಳಿಗಳಲ್ಲಿ ಕಾರ್ಮಿಕರಿಗೆ 13 ಸಾವಿರ ಸಂಬಳ ನೀಡುವುದಾಗಿ ತಿಳಿಸಿದ್ದು, ಈಗ ಸಂಸ್ಥೆ ನೀಡುವ ನಿಯಮಾವಳಿಗಳಲ್ಲಿ 9 ಸಾವಿರ ಎಂದು ಹೇಳಲಾಗಿದೆ. ಎಲ್ಲ ಸಂಸ್ಥೆಗಳಲ್ಲಿ ವರ್ಷದಿಂದ ವರ್ಷಕ್ಕೆ ವೇತನ ಏರಿಕೆಯಾಗುತ್ತದೆ. ಆದರೆ, ನಿಮ್ಮಲ್ಲಿ ಹೇಗೆ ವೇತನ ಇಳಿಕೆಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ 108 ಆಂಬ್ಯುಲೆನ್ಸ್ ಚಾಲಕರ ಸಂಘದ ಅಧ್ಯಕ್ಷ ಶ್ರೀಶೈಲ, ಆಯುಕ್ತರು 3 ಷರತ್ತುಗಳನ್ನು ರದ್ದುಪಡಿಸುವಂತೆ ಸೂಚಿಸಿದ್ದಾರೆ. ಸಂಸ್ಥೆ ಅವುಗಳನ್ನು ರದ್ದುಪಡಿಸಿ ಕಾರ್ಮಿಕ ಕಾಯ್ದೆಯ ಪ್ರಕಾರ ಸಂಬಳ ನೀಡಿದರೆ ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗುತ್ತೇವೆ. ಇಲ್ಲದಿದ್ದರೆ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.