ಅಂಕೋಲಾ: ಒಎಲ್ ಎಕ್ಸ್ ಮೂಲಕ ನಂಬಿಕೆ ಬರುವಂತೆ ವ್ಯವಹರಿಸಿ ವಂಚಿಸುತ್ತಿದ್ದ ಆರೋಪದನ್ವಯ ಯುವಕನೊಬ್ಬನನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ಅಂಕೋಲಾದ ತೆಂಕಣಕೇರಿಯ ಸೂರಜ್ ರಾಮದಾಸ ಕುರ್ಡೇಕರ(21) ಬಂಧಿತ ಯುವಕ. ಒಂದು ವರ್ಷದಿಂದ ಆನ್ ಲೈನ್ ಒಎಲ್ ಎಕ್ಸ್ ನಲ್ಲಿ ಈತ ದ್ವಿಚಕ್ರ ವಾಹನಗಳ ಬಿಡಿಭಾಗಗಳನ್ನು ಖರೀದಿಸುತ್ತಿದ್ದ.
ಮಾರಾಟಗಾರರು ಆನ್ ಲೈನ್ ನಲ್ಲಿ ತಮ್ಮ ವಸ್ತುಗಳ ಚಿತ್ರಗಳನ್ನು ಅಪ್ ಲೋಡ್ ಮಾಡುತ್ತಿದ್ದರು. ಅವರ ಮೊಬೈಲ್ ನಂಬರ್ ಗೆ ಸಂಪರ್ಕಿಸಿ, ಈತ ವ್ಯವಹಾರ ಕುದುರಿಸುತ್ತಿದ್ದ. ಅವರಿಗೆ ವೆಬ್ ಸೈಟ್ ನಿಂದ ಎಚ್ ಡಿಎಫ್ ಸಿ ಬ್ಯಾಂಕ್ ನ ರಶೀದಿ ತೆಗೆದು ಅದರಲ್ಲಿ ಹಣದ ಮೊತ್ತ ನಮೂದಿಸಿ ಸ್ಕ್ರೀನ್ ಶಾಟ್ ತೆಗೆದು ಕಳಿಸುತ್ತಿದ್ದ.
ಶನಿವಾರ ಮತ್ತು ಭಾನುವಾರದ ರಜಾ ದಿನಗಳಲ್ಲಿ ಮಾತ್ರ ವ್ಯವಹಾರ ಮಾಡುತ್ತಿದ್ದ ಸೂರಜ್, ದ್ವಿಚಕ್ರ ವಾಹನದ ವೀಲ್ ಡಿಸ್ಕ್, ಟೈರ್, ಪೆಟ್ರೋಲ್ ಟ್ಯಾಂಕ್, ಸೈಲೆನ್ಸರ್, ರಬ್ಬರ ಜಿಮ್ ವೆಟ್, ಬೈಕ್ ಹ್ಯಾಂಡಲ್ಸ್, ಹೆಲ್ಮೆಟ್, ಯಮಹಾ ಸೀಟ್, ಷಾಕ್ ಅಬ್ಜಾರ್ಬರ್, ಹೆಡ್ ಲೈಟ್, ಮಡ್ ಗಾರ್ಡ್ ಸೇರಿ 20ಕ್ಕೂ ಹೆಚ್ಚಿನ ಇತರ ವಸ್ತುಗಳನ್ನು ಖರೀದಿಸಿ ಮೋಸ ಮಾಡುತ್ತಿದ್ದ.
ಶನಿವಾರ ತಡರಾತ್ರಿ ಪಟ್ಟಣದ ಗಣಪತಿ ದೇವಸ್ಥಾನದ ಬಳಿ ಸಂಶಯಾಸ್ಪದವಾಗಿ ವಸ್ತುಗಳನ್ನು ಹಿಡಿದು ನಿಂತಿದ್ದ ಈತನನ್ನು ಅಂಕೋಲಾ ಪೊಲೀಸರು ವಿಚಾರಿಸಿದಾಗ, ಯಾವುದೇ ದಾಖಲೆಗಳು ಇಲ್ಲದೆ ರು.40 ಸಾವಿರ ಮೌಲ್ಯದ ವಸ್ತುಗಳು ಸಿಕ್ಕಿವೆ. ಇನ್ನಷ್ಟು ಪ್ರಶ್ನಿಸಿದಾಗ ವಂಚನೆ ಪ್ರಕರಣ ಬಯಲಾಗಿದೆ.