ಬೆಂಗಳೂರು: ಉಪಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಾಧಾನದ ಗೂಡಾಗಿದ್ದ ಕಾಂಗ್ರೆಸ್, ಒಗ್ಗಟ್ಟಿನ ಮಂತ್ರದೊಂದಿಗೆ ಪ್ರಚಾರಕ್ಕೆ ಚಾಲನೆ ನೀಡಿದೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ(ಜ.31 ) ರಂದು ಪ್ರಚಾರ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹೋದ್ಯೋಗಿ ಸಚಿವರು, ಶಾಸಕರೆಲ್ಲರನ್ನೂ ಕಟ್ಟಿಕೊಂಡು ಮತಬೇಟೆಗಿಳಿದರು. ಟಿಕೆಟ್ ವಂಚಿತ ಭೈರತಿ ಸುರೇಶ್ ಕೂಡ ವಿವಿಧ ಕಡೆಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿ ರೆಹಮಾನ್ ಷರೀಫ್ ಪರ ಮತ ಯಾಚಿಸಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಒಟ್ಟು 8 ಕಡೆಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಆಯೋಜಿಸಿತ್ತು. ಬೆಳಿಗ್ಗೆ 11 :30 ಕ್ಕೆ ವಿ.ನಾಗೇನಹಳ್ಳಿಯಿಂದ ಆರಂಭಗೊಂಡ ಪ್ರಚಾರ ಸಂಜೆ ಚಾಮುಂಡಿನಗರದಲ್ಲಿ ಕೊನೆಗೊಂಡಿತು. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರಚಾರಕ್ಕೆ ಚಾಲನೆ ನೀಡಿದರು. ಸಚಿವರಾದ ಡಿ.ಕೆ ಶಿವಕುಮಾರ್, ಆರ್ ರೋಷನ್ ಬೇಗ್, ರಾಮಲಿಂಗಾರೆಡ್ಡಿ, ಕೃಷ್ಣಾ ಭೈರೇಗೌಡ, ಕೆಜೆ ಜಾರ್ಜ್, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, ಮುಖಂಡರಾದ ಸಿ.ಎಂ ಇಬ್ರಾಹಿಂ, ನಜೀರ್ ಅಹ್ಮದ್, ನಾರಾಯಣ ಸ್ವಾಮೀ ಮಾಜಿ, ಮಾಜಿ ಸಚಿವ ಹೆಚ್ ಎಂ ರೇವಣ್ಣ, ಮೇ ಯು.ಆರ್ ಬಿ ಎನ್ ಮಂಜುನಾಥರೆಡ್ಡಿ ಮೊದಲಾದವರು ಹಾಜರಿದ್ದು ಒಗ್ಗಟ್ಟು ಪ್ರದರ್ಶಿಸಿದರು.