ಕನ್ನಡ ಶಾಲೆ ಮುಚ್ಚಲು ರಾಜಕಾರಣಿಗಳೇ ಕಾರಣ
ತಾಳಿಕೋಟೆ: ಕರ್ನಾಟಕದಲ್ಲಿ ಹೆಚ್ಚಿನ ರಾಜಕಾರಣಿಗಳ ಹಾಗೂ ಅವರ ಸಂಬಂಧಿಗಳು ಇಂಗ್ಲಿಷ್ ಶಾಲೆಗಳು ಹೊಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚಲು ರಾಜಕಾರಣಿಗಳೇ ಪರೋಕ್ಷ ಕಾರಣರಾಗಿದ್ದಾರೆ ಎಂದು ಬಂಡಾಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ(ಚಂಪಾ)ಆರೋಪಿಸಿದರು.
ಅವರು ಪಟ್ಟಣ ಖಾಸ್ಗತೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಕನ್ನಡ ನುಡಿಬಳಗ ಹಾಗೂ ಇಂಗ್ಲಿಷ್ ಅಸೋಶಿಯೇಷನ್ ಸಂಯುಕ್ತಾಶ್ರದಲ್ಲಿ ನಡೆದ ಕನ್ನಡ ಸಂಸ್ಕೃತಿ- ಸವಾಲುಗಳು ಮತ್ತು ಪರಿಹಾರಗಳು ವಿಷಯದ ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡಿಗರಾದ ನಾವು ಕರ್ನಾಟಕದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದೆವೆ. ರಾಜ್ಯದ ನೆಲ, ಜಲ ವಿವಾದಕ್ಕೆ ರಾಷ್ಟ್ರೀಯ ನೀತಿ ಅಗತ್ಯ. ರಾಷ್ಟ್ರೀಯ ನೀತಿ ಇಲ್ಲದಿದ್ದರೆ ರಾಷ್ಟ್ರೀಯ ಪಕ್ಷಗಳು ರಾಜ್ಯದಲ್ಲಿ ಸಮಸ್ಯೆ ಬಗ್ಗೆ ದಿಟ್ಟ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿದ್ದರೆ ದಿಟ್ಟ ಕ್ರಮ ಕೈಗೊಳ್ಳುತ್ತವೆ.
ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ನೆಲ, ಜಲ ಹಾಗೂ ಭಾಷೆ ರಕ್ಷಣೆ ಸಾಧ್ಯವಿಲ್ಲ. ಅವರಿಗೆ ಅಧಿಕಾರ ಮುಖ್ಯವಾಗಿರುತ್ತದೆ. ಪ್ರಾದೇಶಿಕ ಪಕ್ಷಗಳು ರಾಜ್ಯದ ಸಂಸ್ಕೃತಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸುತ್ತವೆ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ರಕ್ಷಣೆ ಸಾಧ್ಯ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು ಬಿಜಾಪುರದಲ್ಲಿ ನಡೆದ 79ನೇ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ್ಕಿಂತ ಹೆಚ್ಚಾಗಿ ರಾಜಕೀಯ ಮಿಂಚಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು ಕನ್ನಡ ಚಳವಳಿಗಾರರು ಹಾಗೂ ಕಸಾಪ ಪದಾಧಿಕಾರಿಗಳು ತಮ್ಮ ಮಕ್ಕಳನ್ನು ಮೊಮ್ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸಿ ಕನ್ನಡ ಭಾಷೆಯ ಬಗ್ಗೆ ಗಂಟಗಟ್ಟಲೆ ಮಾತನಾಡುವವರು, ಕನ್ನಡ ಪ್ರೇಮವನ್ನು ಎತ್ತಿ ತೋರಿಸುವವರು ಕಪಟಿ, ದೊಂಬಿ ಕನ್ನಡಾಭಿಮಾನಿಗಳು ಹಾಗೂ ಆಷಾಢಭೂತಿಗಳು. ಅವರಿಂದ ಕನ್ನಡವನ್ನು ಉಳಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಚಾರ್ಯ ಡಿ.ಎಸ್. ಹತಗುಂಡಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಧ್ಯಕ್ಷ ವಿ.ಸಿ. ಹಿರೇಮಠ. ಪ್ರೊ. ಚಂದ್ರೇಗೌಡ ಕುಲಕರ್ಣಿ, ಡಾ. ಸಿ.ಲಿಂಗಪ್ಪ, ಡಾ.ಎಂ.ಎಸ್. ಪಾಟೀಲ, ಪ್ರೊ. ದಯಾನಂದ ಮೂಗಡ್ಲಿಮಠ ಸೇರಿದಂತೆ ಇತರರು ಇದ್ದರು.
ಪ್ರೊ. ಶೇಷಾಚಲ ಹವಾಲ್ದಾರ ಪ್ರಾರ್ಥಿಸಿದರು. ಪ್ರೊ. ವೀರಭದ್ರ ಕೌದಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಗುರಪಾದ ಘೀವಾರಿ ಸ್ವಾಗತಿಸಿ ನಿರೂಪಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ವಿಜಯಕುಮಾರ ಹಿರೇಮಠ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.