ಬೇಡಿಕೆ ಈಡೇರಿಕೆಗೆ 'ವರದಿ ತಡೆ' ಚಳವಳಿ
ಬಾಗಲಕೋಟೆ: ಸಾರ್ವಜನಿಕರ ಆರೋಗ್ಯ ಸೇವೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರದಿಂದ (ಜ.28) ಮುಷ್ಕರಕ್ಕಿಳಿದಿದ್ದಾರೆ. ಇದರಿಂದ ಡೆಂಘೀ, ಮಲೇರಿಯಾ, ಕ್ಷಯ ರೋಗಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಸಲ್ಲಿಕೆಯಾಗುವುದಿಲ್ಲ.
ಈ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಬಳಸುತ್ತಿರುವ ಅಸ್ತ್ರ 'ವರದಿ ತಡೆ' ಚಳವಳಿ. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪತ್ತೆಯಾಗುವ ಸಾಂಕ್ರಾಮಿಕ, ಭಯಾನಕ, ದೀರ್ಘಾವಧಿ ರೋಗಗಳ ವರದಿಗಳ ಸಿದ್ಧವಾಗುವುದು ಈ ನೌಕರರಿಂದಲೇ. ಬಳಿಕ ಅವು ಜಿಲ್ಲಾ ಆರೋಗ್ಯ ಅಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಕೆಯಾಗುತ್ತವೆ. ಆದರೀಗ ಈ ವರದಿಯನ್ನು ತಯಾರಿಸುವವರು, ಮೇಲಾಧಿಕಾರಿಗಳಿಗೆ ಸಲ್ಲಿಸುವವರೇ ಮುಷ್ಕರಕ್ಕೆ ಇಳಿದಿದ್ದಾರೆ.
ಬಹು ಹಿಂದೇಯೇ ಘೋಷಿಸಿದಂತೆ ಬೆಂಗಳೂರಿನಲ್ಲಿ ಸೋಮವಾರದಿಂದ ಧರಣಿ- ಉಪವಾಸ ಸತ್ಯಾಗ್ರಹ ಆರಂಭವಾಗಿದ್ದು, ಮೊದಲ ದಿನ ಬಳ್ಳಾರಿ ಜಿಲ್ಲೆಯ ನೌಕರರ ಸರದಿ. ಹೀಗೆ ಎಲ್ಲ ಜಿಲ್ಲೆಯವರೂ ಈ ಸರದಿ ಸತ್ಯಾಗ್ರಹವನ್ನು ಮುಂದುವರಿಸಲಿದ್ದಾರೆ.
ಬೇಡಿಕೆ: ಮೂರ್ನಾಲ್ಕು ತಿಂಗಳಿಗೊಮ್ಮೆ ನೀಡುತ್ತಿರುವ ಸಂಬಳ ಪ್ರತಿ ತಿಂಗಳೂ ಬಟವಡೆಯಾಗಬೇಕು. ವೈದ್ಯಾಧಿಕಾರಿಗಳಿಗೆ ನೀಡುವ ಸೌಲಭ್ಯ ನಮಗೂ ಲಭಿಸಲಿ. ಸಮಾನ ವಿದ್ಯೆಗೆ- ಸಮಾನ ವೇತನ ನೀಡಲು ಮೂಲ ವೇತನದಲ್ಲಿನ ತಾರತಮ್ಯ ನಿವಾರಣೆಯಾಗಲಿ. ಹೊಸ ಆರೋಗ್ಯ ಕೇಂದ್ರಗಳಿಗೆ ಹೊಸ ನೌಕರರ ನೇಮಕ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.