ಅಭಿವೃದ್ಧಿಯೇ ಮಾನದಂಡ: ಸವದಿ
ರಬಕವಿ: ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಆಗಿರುವ ದಾಖಲೆಯ ಅಭಿವೃದ್ಧಿ ಕಾಮಗಾರಿಗಳು ಜನತೆಯ ಕಣ್ಣೆದುರಿಗಿವೆ. ಹತ್ತು ಹಲವಾರು ಜನಪರ ಯೋಜನೆಗಳ ಫಲಾನುಭವಿಗಳು ಪ್ರತಿ ಮನೆಗೊಬ್ಬರಂತೆ ಇದ್ದಾರೆ. ಇಂತಹ ಜನಪರ ಸರ್ಕಾರದ ಕೆಲಸವನ್ನು ಮೆಚ್ಚಿರುವ ತೇರದಾಳ ಕ್ಷೇತ್ರದ ಜನ ಈ ಬಾರಿಯೂ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕ, ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಗುರುವಾರ ಬೆಳಗ್ಗೆ ಪತ್ನಿ ಮೀನಾಕ್ಷಿ ಅವರೊಂದಿಗೆ ಬನಹಟ್ಟಿಯ ನೂತನ ವಿದ್ಯಾಲಯದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಬಕವಿ-ಬನಹಟ್ಟಿ ವ್ಯಾಪ್ತಿಯಲ್ಲಿ ಎಲ್ಲೆಡೆ ಸಿಸಿ ರಸ್ತೆಗಳಾಗಿವೆ. ನೀರು, ಚರಂಡಿ, ಶೌಚಾಲಯ ಮತ್ತು ವಿದ್ಯುತ್ ದೀಪಗಳ ಅಳವಡಿಕೆ ಆಗಿದೆ. ಹಿಂದಿನ ಆಡಳಿತದಲ್ಲಿನ ಕಹಿ ಅನುಭವಗಳನ್ನು ಬಲ್ಲ ಮತದಾರರು ಬಿಜೆಪಿ ಸರ್ಕಾರದ ಜನಪರ ನೀತಿಯನ್ನು ಮೆಚ್ಚಿದ್ದಾರೆ ಎಂದರು.
ನಗರಸಭೆಯ ಎಲ್ಲ 31ವಾರ್ಡಗಳಲ್ಲಿ ಮತ್ತು ಮಹಾಲಿಂಗಪುರ ಪುರಸಭೆಯ ಎಲ್ಲ 23 ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬನಹಟ್ಟಿ ಸಹಕಾರಿ ನೂಲಿನ ಗಿರಣಿ ಅಧ್ಯಕ್ಷ ರವೀಂದ್ರ ಕರ್ಲಟ್ಟಿ,ನಗರ ಬಿಜೆಪಿ ಅಧ್ಯಕ್ಷ ಬಸಯ್ಯ ಹಿರೇಮಠ, ಚಿದಾನಂದ ಹೊರಟ್ಟಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.