ಬಾಗಲಕೋಟೆ: ಮತದಾನ ಬಹಿಷ್ಕಾರ, ಮತಗಟ್ಟೆ ಬಂದ್
ಬಾಗಲಕೋಟೆ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ನಡೆದ ಮತದಾನ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನೂ ನಾಚಿಸುವಂತಿತ್ತು. ಉರಿ ಬಿಸಿಲೂ ಲೆಕ್ಕಸದೇ ಮತದಾರರನ್ನು ಮತಗಟ್ಟೆಗೆ ಕೊಂಡೊಯ್ಯಲು ಅಭ್ಯರ್ಥಿಗಳ ಮಧ್ಯದ ಭಾರಿ ಪೈಪೋಟಿ, ಮತದಾರ ಪ್ರಭುಗಳ ಮುನಿಸು, ಕೆಟ್ಟು ನಿಲ್ಲುವ ಮತಯಂತ್ರಗಳು ಇಡೀ ಚುನಾವಣೆಗೆ ರಂಗೇರಿಸಿದ್ದವು.
ಈ ಚುನಾವಣೆ ಆರಂಭದಿಂದಲೂ ಮತದಾರರ್ನು ಓಲೈಸಲು ಇನ್ನಿಲ್ಲದ ಕಸರತ್ತು ಮಾಡುತ್ತ ಬಂದಿದ್ದ ಅಭ್ಯರ್ಥಿಗಳು ಏನೆಲ್ಲ ಕಟ್ಟುಪಾಡುಗಳಿದ್ದರೂ ಅವುಗಳನ್ನು ಧಿಕ್ಕರಿಸಿ ಮತದಾನದ ದಿನವೂ ತಮ್ಮ ಚಾಳಿಯನ್ನು ಮುಂದುವರಿಸಲು ಹೋಗಿ ಅಧಿಕಾರಿಗಳ ಕೈಗೆ ಸಿಕ್ಕು ಕಕ್ಕಾಬಿಕ್ಕಿಯಾದರು. ಬಾಗಲಕೋಟೆಯ 5ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತದಾರರಿಗೆ ಉಪ್ಪಿಟ್ಟು ವಿತರಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು. ಆದರೆ, ಬಿಜೆಪಿ ಈ ಉಪ್ಪಿಟ್ಟು ಹಂಚುವವರಿಗೂ ತಮ್ಮ ಅಭ್ಯರ್ಥಿಗೂ ಸಂಬಂಧವೇ ಇಲ್ಲ ಎಂದು ಆರೋಪವನ್ನು ನಿರಾಕರಿಸಿದೆ.
ಕೈಗೊಟ್ಟ ಮತಯಂತ್ರ: ಅಧಿಕಾರಿಗಳ ಎಷ್ಟೆಲ್ಲ ಜಾಗೃತಿ, ಕಾಳಜಿಯ ಮಧ್ಯಯೂ ಬಾದಾಮಿಯ 19ನೇ ವಾರ್ಡಿನಲ್ಲಿ ಮತ ಯಂತ್ರ ಮಧ್ಯೆದಲ್ಲಿಯೇ ಕೈಕೊಟ್ಟು ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ಮಧ್ಯೆದ ವಾಗ್ವಾದಕ್ಕೆ ಕಾರಣವಾಗಿತ್ತು. ತಾಂತ್ರಿಕ ಕಾರಣದಿಂದ ಮತಯಂತ್ರ ಕೆಟ್ಟು ನಿಂತಿದ್ದರೆ, ಉದ್ಧೇಶಪೂರ್ವಕ ಮಾಡಲಾಗಿದೆ ಎಂದು ಆರೋಪ, ಪ್ರತ್ಯಾರೋಪದ ಸುರಿಮಳೆಯಾಗಿ ಇನ್ನೇನು ಕೈ ಕೈ ಮಿಲಾಯಿಸುತ್ತಾರೆ ಎನ್ನುವ ಹಂತದಲ್ಲಿ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಸಿಗೊಳಿಸಿದರು. ಅಷ್ಟೊತ್ತಿಗೆ ಸುಸ್ಥಿತಿಯಲ್ಲಿದ್ದ ಮತ್ತೊಂದು ಮತಯಂತ್ರವನ್ನು ಅಳವಡಿಸಿ ಅಧಿಕಾರಿಗಳು ಮತದಾನ ಸುರಳಿತಗೊಳಿಸಿದರು. ಬಾಗಲಕೋಟೆಯ 22ನೇ ವಾರ್ಡಿನ 2 ಬೂತ್ಗಳಲ್ಲೂ ತುಸು ಹೊತ್ತು ಮತಯಂತ್ರಗಳು ಮುನಿಸಿ ಕುಳಿತಿದ್ದವು.
ಜಗಳ ನಿರತರ ಚದುರಿಸಲು ಲಾಠಿ ಪ್ರಹಾರ: ನಿನ್ನೆಯಷ್ಟೆ ಸರ್ಕಾರಿ ಶಾಲಾ ಶಿಕ್ಷತ ಬಿಜೆಪಿ ಪರ ಮತಯಾಚನೆಯಲ್ಲಿ ತೊಡಗಿ ಸೇವೆಯಿಂದ ಅಮಾನತು ಆಗಿದ್ದರೂ ಸರ್ಕಾರಿ ಅಧಿಕಾರಿಗಳಿಗೆ ಅದು ಪಾಠವಾಗಿರಲಿಲ್ಲ. ಹಾಗಾಗಿ ಬಾಗಲಕೋಟೆಯ 12ನೇ ವಾರ್ಡಿನಲ್ಲಿ ಓರ್ವ ಸರ್ಕಾರಿ ಅಧಿಕಾರಿ ಬಿಜೆಪಿ ಅಭ್ಯರ್ಥಿ ಪರ ಮತಹಾಕಿ ಎಂದು ಮತಗಟ್ಟೆಗೆ ಬರುತ್ತಿದ್ದ ಮತದಾರರಿಗೆ ಮನವರಿಕೆ ಮಾಡುತ್ತಿದ್ದಾಗ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಆತನನ್ನು ಹಿಡಿದು ಚುನಾವಣಾಧಿಕಾರಿಗಳ ಕೈಗೆ ಕೊಟ್ಟರು. ವಿಚಾರಣೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಲಾಠಿ ಪ್ರಯೋಗಿಸಿ ಎಲ್ಲರನ್ನೂ ಚದುರಿಸಿ ಸುರಳಿತ ಮತದಾನಕ್ಕೆ ಅವಕಾಶ ಮಾಡಿದರು.
ತೇರದಾಳದಲ್ಲಿ ಮತದಾನ ನಡೆಯಲಿಲ್ಲ: ಜಮಖಂಡಿ ತಾಲೂಕಿನ ತೇರದಾಳ ನಾಗರಿಕರು ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಪುರಸಭೆ ಚುನಾವಣೆಯನ್ನು ಬಹಿಷ್ಕರಿಸಿದ ಹಿನ್ನಲೆಯಲ್ಲಿ ತೇರದಾಳದಲ್ಲಿ ಚುನಾವಣೆಯ ಯಾವುದೇ ಚಟುವಟಿಕೆ ನಡೆಯಲಿಲ್ಲ. ಆದರೆ, ಈ ವರೆಗೆ ಸುಮ್ಮನೇ ಇದ್ದ ರಬಕವಿ-ಬನಹಟ್ಟಿ ನಗರಸಭೆಯ 3ನೇ ವಾರ್ಡಿನ ನಾಗರಿಕರು ಗುರುವಾರ ಇದ್ದಕ್ಕಿದ್ದಂತೆ ಮತದಾನ ಬಹಿಷ್ಕರಿಸಿದರು. ಹಿಂದೆ ಆಸಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದ ಪ್ರದೇಶವನ್ನು ವಿಧಾನಸಭೆ ಕ್ಷೇತ್ರ ವಿಂಗಡನೆ ವೇಳ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಹತ್ತು-ಹಲವು ರೀತಿಯ ಸಮಸ್ಯೆ ಎದುರಿಸುವಂತಾಗಿದೆ. ಹಾಗಾಗಿ ತಮ್ಮನ್ನು ಪುನಃ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಬೇಕು ಎನ್ನುವುದು ಅವರ ಬೇಡಿಕೆ.
ಇಂಥ ಅನೇಕ ಘಟನೆಗಳು ಉರಿ ಬಿಸಿಲಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗೆ ರಂಜನೆ ನೀಡಿದರೆ, ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ಆತಂಕ,ಉತ್ಸಾಹಕ್ಕೂ ಕಾರಣವಾದವು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.