ತೇರದಾಳ ತಾಲೂಕಿಗಾಗಿ 30ನೇ ದಿನದಲ್ಲಿ ಹೋರಾಟ
ರಬಕವಿ: ತೇರದಾಳ ಪಟ್ಟಣವನ್ನು ತಾಲೂಕು ಕೇಂದ್ರ ಎಂದು ಘೋಷಿಸಲು ಆಗ್ರಹಿಸಿ ತೇರದಾಳ ತಾಲೂಕು ಹೋರಾಟ ಸಮಿತಿ ನಾಗರಿಕರ ಬೆಂಬಲದೊಡನೆ ನಡೆಸುತ್ತಿರುವ ಹೋರಾಟ ಶನಿವಾರ 30ನೇ ದಿನದಲ್ಲಿ ಮುಂದುವರಿದಿದೆ.
ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟಕ್ಕೆ ವಿವಿಧ ವಾರ್ಡ್ಗಳ, ಸಮುದಾಯಗಳ ಮತ್ತು ಮಠಾಧೀಶರ, ವಿದ್ಯಾರ್ಥಿಗಳ, ವರ್ತಕರ, ಜನಪ್ರತಿನಿಧಿಗಳ ಬೆಂಬಲ ವ್ಯಕ್ತವಾಗಿದೆ.
ಬಿರು ಬಿಸಿಲಿನ ಆರ್ಭಟವಿದ್ದರೂ ಹೋರಾಟಗಾರರಲ್ಲಿ ತಾಲೂಕಿನ ಕಿಚ್ಚು ಹೆಚ್ಚಿದೆ. ಚುನಾವಣೆಯ ಗುಂಗು ಈ ಬಾರಿ ತಾಲೂಕು ಘೋಷಣೆ ಹಿನ್ನೆಲೆಯಲ್ಲಿ ಬಹಿಷ್ಕಾರ ಹಾಕಿದ್ದರಿಂದ ಇಲ್ಲಿ ಕಾಣುತ್ತಿಲ್ಲವಾದರೂ ನೆರೆಯ ಪ್ರದೇಶಗಳಲ್ಲಿನ ಫಲಿತಾಂಶದ ಚರ್ಚೆಯನ್ನೂ ನಾಗರಿಕರು ಮಾಡುತ್ತಿಲ್ಲ. ಚುನಾವಣೆ ಬಹಿಷ್ಕಾರದಿಂದಾಗಿ ನಾಗರಿಕರು ತಾಲೂಕಿಗಾಗಿ ಎಂಥದೇ ಹೋರಾಟಕ್ಕೆ ಸಿದ್ಧ ಎಂಬ ಸಂದೇಶ ಬಿಂಬಿಸಿದಂತಾಗಿದೆ.
ಶನಿವಾರದ ಸತ್ಯಾಗ್ರಹದಲ್ಲಿ ಭೋವಿ ಸಮಾಜ ಸೇರಿದಂತೆ ಪ್ರಮುಖ ಹೋರಾಟಗಾರರು, ತೇರದಾಳ ಪಟ್ಟಣ ಸಾಂಗಲಿ ಸಂಸ್ಥಾಪಕರ ಕಾಲದಲ್ಲಿ ತಾಲೂಕು ಕೇಂದ್ರವಾಗಿ, ಸದ್ಯ ಮತಕ್ಷೇತ್ರವಾಗಿ ಹಾಗೂ ಹೋಬಳಿ ಕೇಂದ್ರವಾಗಿದ್ದು, ತಾಲೂಕಿಗೆ ಬೇಕಾದ ಎಲ್ಲ ಅರ್ಹತೆಗಳಿದ್ದರೂ ರಾಜ್ಯ ಸರ್ಕಾರ ಪಟ್ಟಣವನ್ನು ತಾಲೂಕೆಂದು ಪರಿಗಣಿಸದೇ ಅನ್ಯಾಯ ಎಸಗಿದೆ.
ಅನ್ಯಾಯ ಸರಿಪಡಿಸಬೇಕು ಮತ್ತು ತಕ್ಷಣ ತೇರದಾಳ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಿಸಬೇಕು ಇಲ್ಲವಾದಲ್ಲಿ ಹೋರಾಟದ ಸ್ವರೂಪವನ್ನು ವಿಸ್ತರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.