ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಗಲಕೋಟೆ

ತೋಟಗಾರಿಕೆ ವಿವಿಯಲ್ಲಿ ಇಂಗ್ಲಿಷ್ ವ್ಯಾಮೋಹ

Parashurama
Updated On : 17 Mar 2013, 12:36 pm

ಬಾಗಲಕೋಟೆ:  ಬರಗಾಲ ಮತ್ತು ಹಿಂದುಳಿದ ಜಿಲ್ಲೆಗಳಲ್ಲಿ ತೋಟಗಾರಿಕೆ ಕೃಷಿ ಅಭಿವೃದ್ಧಿಗೊಳಿಸುವ ಪಣ ತೊಟ್ಟು ಬಾಗಲಕೋಟೆಯಲ್ಲಿ ಮೂರು ವರ್ಷಗಳ ಹಿಂದೆ ಆರಂಭವಾಗಿರುವ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಅಂಟಿಕೊಂಡಿರುವ ಇಂಗ್ಲಿಷ್ ವ್ಯಾಮೋಹ ಈ ಭಾಗದ ರೈತರನ್ನು ಕಂಗೆಡಿಸಿದೆ.
ಯಾವುದೇ ಮಾಹಿತಿ ಕೇಳಲು ವಿವಿಗೆ ಬರುವ, ಇಲ್ಲವೇ ವಿವಿಯೇ ಆಯೋಜಿಸುವ ತಿಳಿವಳಿಕೆ ಶಿಬಿರಗಳಲ್ಲಿ ಭಾಗವಹಿಸುವ ರೈತರಿಗೆ ಮಾತುಗಳು ಮಾತ್ರ ಕನ್ನಡದಲ್ಲಿ ಕೇಳಿಸುತ್ತವೆ. ಉಳಿದಂತೆ ಬೀಜ, ಗೊಬ್ಬರ, ತಳಿ ಸಂಸ್ಕರಣೆ, ಹಣ್ಣುಗಳ ಸಂಸ್ಕರಣೆ, ಹೊಸ ಹೊಸ ಆವಿಷ್ಕಾರಗಳ ಮಾಹಿತಿ ಮಾತ್ರ ಇಂಗ್ಲಿಷ್ ಮುದ್ರಿತ ಪ್ರತಿಗಳಲ್ಲಿ ಸಿಗುತ್ತಿವೆ. ಇಂಥದೊಂದು ಹೊಸ ತಂತ್ರಜ್ಞಾನ ಬಂದಿದೆ ಎಂದು ಹೇಳುವ ಅಧಿಕಾರಿಗಳು ಎಲ್ಲ ಮಾಹಿತಿ ಇರುವ ಕರಪತ್ರಗಳನ್ನು ರೈತರ ಕೈಗಿತ್ತು, ನಿಮ್ಮ ತೋಟಗಳಲ್ಲಿ ಬಳಸಿ, ಉಪಯೋಗಿಸಿ ಎಂದು ಅಪ್ಪಣೆ ನೀಡುತ್ತಿದ್ದಾರೆ.
ಎಲ್ಲವೂ ಇಂಗ್ಲಿಷ್‌ನಲ್ಲಿ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸೇರಿದಂತೆ ರಾಷ್ಟ್ರದ ಹೆಸರಾಂತ ಕೃಷಿ-ತೋಟಗಾರಿಕಾ ಸಂಶೋಧನಾ ಸಂಸ್ಥೆಗಳು ಹೊರತರುವ ತೋಟಗಾರಿಕೆಯಲ್ಲಿನ ಹೊಸ ಹೊಸ ಆವಿಷ್ಕಾರ, ತಂತ್ರಜ್ಞಾನ, ಹವಾಮಾನ, ಬೀಜ, ಗೊಬ್ಬರ, ಕ್ರಿಮಿನಾಶಕ, ಸಂಸ್ಕರಣಾ ಘಟಕ ಇತ್ಯಾದಿಗಳ ಕುರಿತ ಸಮಗ್ರ ವಿವರ ಇರುವ ಇಂಗ್ಲಿಷ್ ಭಾಷೆಯ ಮಾಹಿತಿ ಪತ್ರಗಳನ್ನು ಕನ್ನಡಕ್ಕೆ ಅನುವಾದಿಸದೇ ಯಥಾವತ್ತಾಗಿ ಅವುಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಿ ವಿವಿ ರೈತರ ಕೈಗೆ ಇಡುತ್ತಿದೆ.
ಬಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ಗುಲ್ಬರ್ಗ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಕನ್ನಡ ಓದಲು-ಬರೆಯಲು ಬರುವ ರೈತರ ಸಂಖ್ಯೆ ಕೇವಲ ಶೇ. 23ರಷ್ಟು ಮಾತ್ರ. ಇನ್ನು ಅವರಲ್ಲಿ ಇಂಗ್ಲಿಷ್ ಅರ್ಥ ಮಾಡಿಕೊಳ್ಳವವರ ಸಂಖ್ಯೆ ಶೇ.7 ಎನ್ನುವುದನ್ನು ಧಾರವಾಡ ಕೃಷಿ ವಿವಿ ಈ ಹಿಂದೆಯೇ ಮಾಡಿದ ಸಮೀಕ್ಷೆಯಲ್ಲಿ ಒತ್ತಿ ಹೇಳಿದೆ. ಈ ಸತ್ಯ ಗೊತ್ತಿದ್ದರೂ ತೋಟಗಾರಿಕೆ ವಿವಿ ಹೊಸ ಆವಿಷ್ಕಾರ- ತಂತ್ರಜ್ಞಾನಗಳ ಬಗ್ಗೆ ರೈತರಿಗೆ ತಿಳಿಸಲು ಇಂಗ್ಲಿಷ್ ಭಾಷೆಯನ್ನು ಮಾಧ್ಯಮ ಮಾಡಿಕೊಂಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.
ಉಪಕರಣಗಳ ಮಾಹಿತಿಯೂ ಇಂಗ್ಲಿಷ್‌ನಲ್ಲಿ: ಸಸಿ ನಾಟಿ ಮಾಡುವ ಯಂತ್ರ, ಅಡಿಕೆ ಸುಲಿಯುವ ಯಂತ್ರ, ಬಹು ತಾಳಗಳ ಕೂರಿಗೆ, ಮಾವು ಇಳಿಸುವ ಹಿಡಿಕೆ ಜಾಳಿಗೆ, ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ಯಂತ್ರ, ಮಾವು ಸಂಸ್ಕರಿಸುವ ಕಿರು ಘಟಕ, ಅಣಬೆ ಸಂಸ್ಕರಣಾ ಯಂತ್ರ, ಮೇವು ಕತ್ತರಿಸುವ ಯಂತ್ರ, ಟೊಮೇಟೊ ಸಂಸ್ಕರಣ ಯಂತ್ರ, ಸುಧಾರಿತ ರಂಟೆ-ಕುಂಟೆಗಳ ವಿವರವನ್ನು ವಿವಿ ಕನ್ನಡದಲ್ಲಿ ನೀಡುತ್ತಿಲ್ಲ.
ರೈತರಿಗೆ ತಲುಪದ ಹೊಸ ಆವಿಷ್ಕಾರಗಳು: ಕೃಷಿ- ತೋಟಗಾರಿಕೆ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಜನ್ಮ ತಾಳುವ ಹೊಸ ಹೊಸ ಆವಿಷ್ಕಾರ, ತಂತ್ರಜ್ಞಾನಗಳು ರೈತರಿಗೆ ಪೂರ್ಣ ಪ್ರಮಾಣದಲ್ಲಿ ತಲುಪದೇ ಇರುವುದಕ್ಕೆ ವಿವಿಯ ಈ ಇಂಗ್ಲಿಷ್ ವ್ಯಾವೋಹವೇ ಕಾರಣ.
ಈ ವಿವಿಯ ಸಂಶೋಧಕರು, ವಿಸ್ತರಣಾ ವಿಭಾಗದ ಅಧಿಕಾರಿಗಳು ಉರಿ ಬಿಸಿಲು, ಮಳೆ-ಗಾಳಿ, ಚಳಿಯ ಕಾರಣ ನೀಡಿ ರೈತರನ್ನು ಹುಡುಕಿಕೊಂಡು ಹೋಗುವುದೇ ಕಡಿಮೆ. ಏನಿದ್ದರೂ ಶಿಬಿರ, ವಿಚಾರ ಸಂಕೀರ್ಣ, ಕ್ಷೇತ್ರೋತ್ಸವಗಳಲ್ಲಿ ಕಂಗ್ಲಿಷ್‌ನಲ್ಲೇ ಪುಂಕಾನು ಪುಂಕ ಭಾಷಣ ಬಿಗಿಯುತ್ತಾರೆ. ಆವಿಷ್ಕಾರಗೊಂಡಿರುವ ಯಾವುದಾದರೊಂದು ತಂತ್ರಜ್ಞಾನದ ಬಗ್ಗೆ ಹಳ್ಳಿಯವರಿಗೆ ವಿವರಿಸಿ ಎಂದರೆ ಇವರಿಗೆ ಸಾಧ್ಯವಾಗುವುದೇ ಇಲ್ಲ.
ಬಹುತೇಕ ಪ್ರಾಧ್ಯಾಪಕರು, ಸಂಶೋಧಕರು ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದಿದ್ದರೂ ಅವರು ಓದಿದ್ದು ಇಂಗ್ಲಿಷ್ ಮಾಧ್ಯಮದಲ್ಲಿ ಎನ್ನುವ ಕಾರಣಕ್ಕೆ ಅವರಿಗೆ ತಮ್ಮ ಓದಿನ ಅನುಭವ, ಸಂಶೋಧನೆಗಳನ್ನು ಈ ನೆಲದ ರೈತರಿಗೆ ಮನವರಿಕೆ ಮಾಡಲು ಆಗುತ್ತಿಲ್ಲ. ಹಾಗಾಗಿ ಅವು ರೈತರಿಗೆ ತಲುಪದೇ ಶೈತ್ಯಾಗಾರದಲ್ಲಿ ಕೊಳೆಯುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments