ಹೊಸ ತಂತ್ರಜ್ಞಾನ ರೈತರಿಗೆ ತಲುಪುತ್ತಿಲ್ಲ: ದಂಡಿನ
ಬಾಗಲಕೋಟೆ: ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ ಸಹ ರೈತರಿಗೆ ಅವುಗಳ ಮಾಹಿತಿ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಈ ಕುರಿತ ಜಾಗೃತಿಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಬಹಳ ಪ್ರಮುಖ ಎಂದು ತೋಟಗಾರಿಕೆ ವಿಶ್ವವಿದ್ಯಾಯದ ಕುಲಪತಿ ಡಾ.ಎಸ್.ಬಿ.ದಂಡಿನ ಅಭಿಪ್ರಾಯಪಟ್ಟರು.
ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಇಲ್ಲಿನ ಲಡ್ಡು ಮುತ್ತ್ಯಾ ಮಠದ ಆವರಣದಲ್ಲಿ ಆಯೋಜಿಸಿದ್ದ ತಂತ್ರಜ್ಞಾನ ಪ್ರದರ್ಶನ ಹಾಗೂ ಸಮೂಹ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ರೈತರು ಹೊಸ ತಂತ್ರಜ್ಞಾನದ ಬಗ್ಗೆ ಸರಿಯಾದ ಮಾಹಿತಿ ಪಡೆದು ಕೃಷಿಯಲ್ಲಿ ಅವುಗಳನ್ನು ಅಳವಡಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆರ್ಥಿಕ ಭದ್ರತೆ ಹೊಂದಬೇಕು ಎಂದು ಅವರು ರೈತರಿಗೆ ಕರೆ ನೀಡಿದರು.
ಕೃಷಿ ಇಲಾಖೆ ಅಭಿವೃದ್ಧಿ ಪಡಿಸಿದ ಹೊಸ ತಂತ್ರಜ್ಞಾನಗಳನ್ನು ಮಾಧ್ಯಗಳ ಮೂಲಕ ರೈತರಿಗೆ ಪರಿಚಯಿಸಿದಾಗ ಮಾತ್ರ ತಂತ್ರಜ್ಞಾನದ ಪರಿಪೂರ್ಣ ಉಪಯೋಗವಾಗುತ್ತದೆ. ರೈತರು ಸಹ ಸುಧಾರಿತ ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳವಲ್ಲಿ ಆಸಕ್ತಿ ವಹಿಸಬೇಕಾಗುತ್ತದೆ ಎಂದು ಡಾ. ದಂಡಿನ ಕಿವಿಮಾತು ಹೇಳಿದರು.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಬಿ. ಬಾಲಕೃಷ್ಣ ಅವರು, ಇಂದಿನ ಎಲ್ಲ ತಂತ್ರಜ್ಞಾನಗಳನ್ನು ರೈತರಿಗೆ ತಿಳಿಸುವಲ್ಲಿ ಮಾಧ್ಯಮಗಳ ಕಾರ್ಯ ಮಹತ್ವದಾಗಿದೆ. ಕೃಷಿ ಇಲಾಖೆಗಳು ರೈತರೊಂದಿಗೆ ಕೈಜೋಡಿಸಿದಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ಈಗಾಗಲೇ ಹಲವಾರು ತಂತ್ರಜ್ಞಾನಗಳ ಬಗ್ಗೆ ಮಾಧ್ಯಮಗಳ ಮುಖಾಂತರ ಮಾಹಿತಿ ನೀಡಿದ್ದರ ಫಲವಾಗಿ ರೈತರ ಮೇಲೆ ಪ್ರಭಾವ ಬೀರಿದೆ. ಅವುಗಳನ್ನು ಬಳಸುವಲ್ಲಿ ಅವರು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಹೇಳಿದರು.
ಸಂವಾದಲ್ಲಿ ರೈತರು ಮತ್ತು ರೈತ ಮಹಿಳೆಯರು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಮುಖ್ಯ ವಿಜ್ಞಾನಿ ನೀತಾ ಖಾಂಡೇಕರ, ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಮಾಹಿತಿ ಅಧಿಕಾರಿ ಡಾ. ಪಿ.ಬಿ. ಗದ್ದಗಿಮಠ, ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಈ ಸೆಂಥಿಲಕುಮಾರ, ಪಿಪಿಎಂಸಿ ಡಾ. ಅಶೋಕ ಆಲೂರ, ಬಾಗಲಕೋಟೆ ತೋಟಗಾರಿಕೆ ವಿವಿ ಕುಲಸಚಿವ ಡಾ. ಎ.ಬಿ. ಪಾಟೀಲ, ಬಾಗಲಕೋಟೆ ತೋಟಗಾರಿಕೆ ವಿವಿ ವಿಸ್ತಾರಣಾ ಅಧಿಕಾರಿ ಡಾ. ವೈ.ಕೆ. ಕೋಟಿಕಲ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.