4ರಂದು ಗ್ರಾಪಂ ಚುನಾವಣೆ,ಮದ್ಯಪಾನ ನಿಷೇಧ
ಹಾಸನ: ಜಿಲ್ಲೆಯ ನಾನಾ ಕಡೆ ಆ.4ರ ಭಾನುವಾರ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ನಿಗದಿತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮತದಾನಕ್ಕಾಗಿ ಮತದಾರರ ತಂಡಗಳನ್ನು ನೇಮಿಸಲಾಗಿದೆ. ಆ.7ರ ಬುಧವಾರ ಬೆ. 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆಯು ನಡೆಯಲಿದೆ. ಮತದಾನದ ಹಿಂದಿನ ದಿನದಂದು ಹಾಗೂ ಮತದಾನ ದಿನಗಳಂದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾಗೂ ಎಣಿಕೆ ದಿನವಾದ ಆ.7ರಂದು ತಾಲೂಕು ಕೇಂದ್ರಗಳಲ್ಲಿ ಮದ್ಯಪಾನ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ತಿಳಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಜಿಲ್ಲೆಯ 17 ಗ್ರಾಮ ಪಂಚಾಯಿತಿಗಳ 18 ಕ್ಷೇತ್ರಗಳಲ್ಲಿ ತೆರವಾದ ಸ್ಥಾನಗಳಿಗೆ ಚುನಾವಣೆಯನ್ನು ಘೋಷಿಸಲಾಗಿತ್ತು. ವೇಳಾಪಟ್ಟಿಯಂತೆ ಕಳೆದ 17 ರಂದು ಕಚೇರಿಯಿಂದ ಅಧಿಸೂಚನೆಗಳನ್ನು ಹೊರಡಿಸಿ, ನಿಗದಿತ ಸ್ಥಳಗಳಲ್ಲಿ ಪ್ರಕಟಿ ಸಲಾಗಿತ್ತು. ಈ ಪೈಕಿ ನಿಗದಿತ ಸಮಯದಲ್ಲಿ ಹಾಸನ ತಾಲೂಕಿನ ಶಂಕರನಹಳ್ಳಿ ಗ್ರಾಮ ಪಂಚಾ ಯಿತಿಯ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ. ಉಳಿದ 17 ಕ್ಷೇತ್ರಗಳಿಗೆ 75 ನಾಮಪತ್ರ ಗಳು ಸಲ್ಲಿಕೆ ಆಗಿದ್ದವು, ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ, ಹಂಡ್ರಂಗಿ, ರಾಮನಾಥ ಪುರ, ರುದ್ರಪಟ್ಟಣ, ಬೇಲೂರು ತಾಲೂಕಿನ ಯಲಹಂಕ, ಚನ್ನರಾಯ ಪಟ್ಟಣ ತಾಲೂಕಿನ ನಲ್ಲೂರು (ಚೋಳೇನ ಹಳ್ಳಿ)ನಲ್ಲೂರು (ಗುಳ್ಳಹಳ್ಳಿ),ಅಣತಿ, ಕಲ್ಕೆರೆ ಮತ್ತು ಹೊಳೆನರಸೀಪುರ ತಾಲೂಕಿನ ಓಡನ ಹಳ್ಳಿ ಗ್ರಾಮ ಪಂಚಾಯ್ತಿ ಕ್ಷೇತ್ರಗಳ ಖಾಲಿ ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. (ಒಟ್ಟು 10 ಗ್ರಾಪಂಕ್ಷೇತ್ರಗಳು) 7 ಸ್ಥಾನಗಳಿಗೆ 22 ಉಮೇದುದಾರರು ಸ್ಪರ್ಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹಣ, ಚಿನ್ನದ ಒಡವೆ ಕಳವು
ಚನ್ನರಾಯಪಟ್ಟಣ: ಬೀಗ ಹಾಕಿದ್ದ ಮನೆಯೊಂದರ ಹಿಂಬಾಗಿಲು ಒಡೆದು ಮನೆಯಲ್ಲಿದ್ದ ಹಣ ಹಾಗೂ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಪಟ್ಟಣದ ವಿದ್ಯಾನಗರದ ನಿವೃತ್ತ ನೌಕರ ಮಂಜಪ್ಪ ಅವರು ಬೆಂಗಳೂರಿನಲ್ಲಿರುವ ಮಗನ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನ ಗಮನಿಸಿದ ಕಳ್ಳರು ಹಿಂಬಾಗಿಲಿನ್ನು ಕಬ್ಬಿಣದ ರಾಡಿನಿಂದ ಒಡೆದು ಒಳನುಗ್ಗಿ ಮನೆಯಲ್ಲಿದ್ದ ಒಂದು ಲಕ್ಷ ನಗದು ಹಾಗೂ 200 ಗ್ರಾಂ ಚಿನ್ನವನ್ನು ದೋಚಿದ್ದಾರೆ. ಹಣ ಹಾಗೂ ಚಿನ್ನದಿಂದ 5ಲಕ್ಷ ರು.ಅಂದಾಜಿಸಿದ್ದು, ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಮಾರಪ್ಪ ತಿಳಿಸಿದರು. ಪಟ್ಟಣ ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ.
ಪಾರ್ಕಿನ್‌ಸನ್ ಜನ ಜಾಗೃತಿ
ಹಾಸನ: ನಗರದ ಬಾಸೆಲ್ ಗಾಂಗ್ಲಿಯಾ ಸಪೋರ್ಟ್ ಗ್ರೂಪ್, ಬೆಂಗಳೂರಿನ ಗ್ಲೋಬಲ್ ಆಸ್ಪತ್ರೆ ಸಹಯೋಗದೊಂದಿಗೆ ಆಗಸ್ಟ್ 4 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಸಾಲಗಾಮೆ ರಸ್ತೆಯಲ್ಲಿರುವ ಜನಕಲ್ಯಾಣ ಸಿಟಿ ಸ್ಕ್ಯಾನ್ ಸೆಂಟರ್‌ನಲ್ಲಿ ಪಾರ್ಕಿಸನ್ ರೋಗದ ಕುರಿತು ಪೂರ್ವಪರ ಲಕ್ಷಣದ ಬಗ್ಗೆ ಉಚಿತ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ರೋಗದ ಬಗ್ಗೆ ರೋಗಿಗಳ ಶುಶ್ರೂಷೆ ಕುರಿತು ಮಾಹಿತಿ ನೀಡಿ ರೋಗಿಗಳೊಂದಿಗೆ ನೇರವಾಗಿ ಚರ್ಚಿಲಾಗುವುದು.
ಇಂದು ಸಂವಾದ
ಅರಸೀಕೆರೆ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಆ.2ರಂದು ಕನಕದಾಸರ ಸಾಮಾಜಿಕ, ಸಾಂಸ್ಕತಿಕ ಹಾಗೂ ಪಾರಮಾರ್ಥಿಕ ಜೀವನ ದರ್ಶನ ಕುರಿತಂತೆ ಸಂವಾದ ಕಾರ್ಯಕ್ರಮವನ್ನು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಕುಂ.ಸಿ.ಉಮೇಶ್, ಡಾ.ಎಂ.ಪಿ,ಗಂಗಾಧರಯ್ಯ ಪಾಲ್ಗೊಳ್ಳಲಿದ್ದು ಖ್ಯಾತ ಗಮಕ ಕಲಾಶ್ರೀ ಗಣೇಶ್ ಉಡುಪ ಕನಕದಾಸರ ಕೀರ್ತನೆಗಳನ್ನು ಹಾಡಲಿದ್ದಾರೆಂದು ಕಾಲೇಜು ಪ್ರಾಂಶುಪಾಲ ಸೈಯದ್ ಬಾಷ ತಿಳಿಸಿದ್ದಾರೆ.