ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಣೆದೊಡ್ಡಿಗೆ ಸಿಇಒ ಭೇಟಿ; ಡೆಂಘೀ ಪೀಡಿತ ಕುಟುಂಬಗಳಿಗೆ ಸೊಳ್ಳೆ ಬ್ಯಾಟ್ ವಿತರಣೆ

Srinivasa Murthy VN
Updated On : 2 Aug 2013, 1:33 am

ಕ.ಪ್ರ.ವಾರ್ತೆ ರಾಮನಗರ ಆ.1
ಡೆಂಘೀ ಪೀಡಿತ ಅಣೆದೊಡ್ಡಿ ಗ್ರಾಮಕ್ಕೆ ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದು, ಇದೇ ವೇಳೆ ರೋಟರಿ ಸಂಸ್ಥೆಯು ಡೆಂಘೀ ಪೀಡಿತ ಕುಟುಂಬದವರಿಗೆ ಸೊಳ್ಳೆ ಬ್ಯಾಟುಗಳನ್ನು ವಿತರಿಸಿದೆ.  
ಗ್ರಾಮದಲ್ಲಿರುವ 296 ಕುಟುಂಬಗಳ 1174 ಜನ ಸಂಖ್ಯೆಯಲ್ಲಿ 150ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದಾರೆ. ಈ ಪೈಕಿ 40 ಮಂದಿಗೆ ಡೆಂಘೀ ಶಂಕೆಯಿದ್ದು, ತಲಾ 9 ಮಂದಿಗೆ ಚಿಕೂನ್ ಗುನ್ಯ ಮತ್ತು ಡೆಂಘೀ ದೃಢಪಟ್ಟಿದೆ ಎಂದು ಅಧಿಕಾರಿಗಳ ತಂಡಕ್ಕೆ ಸ್ಥಳೀಯ ವೈದ್ಯಾಧಿಕಾರಿ ಡಾ.ಕಾವ್ಯ ತಿಮ್ಮಯ್ಯ ವಿವರಿಸಿದ್ದಾರೆ.  
ಕನಕಪುರ ತಾಲೂಕಿನ ಅಣೆದೊಡ್ಡಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹಿಪ್ಪುನೇರಳೆ, ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಈ ಕಾರಣದಿಂದಲೇ ಇಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಡೆಂಘೀಗೆ ಇಲ್ಲಿ ಇಬ್ಬರು ಬಲಿಯಾಗಿದ್ದಾರೆ. ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.   
ನಿಯಂತ್ರಣ ಕ್ರಮಗಳು: ಗ್ರಾಮದಲ್ಲಿ ಕಂಡುಬಂದಿರುವ ಡೆಂಘೀ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗು ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಗ್ರಾಮದಲ್ಲಿ ಈಗ ಜ್ವರ ನಿಯಂತ್ರಣಕ್ಕೆ ಬಂದಿದೆ. ರೋಗ ನಿಯಂತ್ರಣಕ್ಕೆ ಗ್ರಾಮಸ್ಥರ ಸಹಭಾಗಿತ್ವ, ನೈರ್ಮಲ್ಯ ಕಾಪಾಡುವಿಕೆ ಅಗತ್ಯವಿದೆ ಎಂದು ಅಧಿಕಾರಿಗಳ ತಂಡ  ಅಭಿಪ್ರಾಯಪಟ್ಟಿತು.
ಗ್ರಾಮದ ಶಾಲೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಬೇವಿನ ಸೊಪ್ಪಿನ ಹೊಗೆ ಮೂಲಕ ಸೊಳ್ಳೆಗಳನ್ನು ಹೋಗಲಾಡಿಸಲಾಗುತ್ತಿದೆ. ಚರಂಡಿ, ಅನೈರ್ಮಲ್ಯ ತಾಣಗಳು, ದನದ ಕೊಟ್ಟಿಗೆಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ. ಸೊಳ್ಳೆಗಳು ಮೊಟ್ಟೆ ಇಡುವ ತಾಣಗಳಲ್ಲಿ ರೇಷ್ಮೆ ಹುಳುಗಳಿಗೆ ತೊಂದರೆಯಾಗದಂತೆ ಡಿಕಾಲ್ ಅಂಟಿಸೆಪ್ಟಿಕ್ ಸಿಂಪಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 166 ಪ್ರಕರಣ: ರಾಮನಗರ ಜಿಲ್ಲೆಯಲ್ಲಿ ಇದುವರೆಗೂ 166 ಡೆಂಘೀ ಪ್ರಕರಣಗಳು ವರದಿಯಾಗಿದ್ದು,  3 ಜನರು ಮೃತಪಟ್ಟಿರುವರು. ಎಲ್ಲಾ ಶಾಲೆಗಳಿಗೆ ಮುನ್ನೆಚ್ಚರಿಕೆ ತಿಳುವಳಿಕೆ ನೀಡಲಾಗಿದೆ. ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಕೆಲ ಗ್ರಾಮಗಳಲ್ಲಿ ಧೂಮೀಕರಣ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್ ಮಾಹಿತಿ ನೀಡಿದರು.
ರೋಟರಿ ಸಹಕಾರ: ಜಿಲ್ಲಾದ್ಯಂತ ಡೆಂಘೀ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಜತೆ ರಾಮನಗರ ರೋಟರಿ ಸಂಸ್ಥೆ ಪೂರ್ಣ ಪ್ರಮಾಣದ ಸಹಕಾರ ನೀಡಲಿದೆ. ಡೆಂಘೀ ಪೀಡಿತ ಜನರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವಾಗಲು ಸಿದ್ಧ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಜಿ. ಚಂದ್ರಶೇಖರ್ ಇದೇ ವೇಳೆ ಸ್ಪಷ್ಟಪಡಿಸಿದರು.

ನಿರ್ದೇಶಕಿ ಭೇಟಿ
ಡೆಂಘೀ ಪೀಡಿತ ಅಣೆದೊಡ್ಡಿ ಗ್ರಾಮಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಜಂಟಿ ನಿರ್ದೇಶಕಿ ಡಾ.ಸುಲೋಚನಾ ನೇತೃತ್ವದ ಅಧಿಕಾರಿಗಳ ತಂಡವೂ ಬುಧವಾರ ಭೇಟಿ ನೀಡಿತ್ತು.   ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಸುಲೋಚನಾ ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಿಗೆ ತೆರಳಿ ಸೊಳ್ಳೆ ಲಾರ್ವ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಲು ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.  10 ದಿನಗಳ ಅವಧಿಯಲ್ಲಿ 1000 ಮನೆಗಳಿಗೆ ಭೇಟಿ ನೀಡಿ, ವರದಿ ಸಂಗ್ರಹಿಸುವಂತೆ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಅಣೆದೊಡ್ಡಿಯಲ್ಲಿ ಕಾಡಿದ್ದ ಜ್ವರಭೀತಿಯು ಇದೀಗ ನಿಯಂತ್ರಣಕ್ಕೆ ಬರಲಾರಂಭಿಸಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement