ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಉತ್ತಮ ಸಮಾಜ ನಿರ್ಮಾಣಕ್ಕೆ ಆರೋಗ್ಯ ಅತಿ ಮುಖ್ಯ

Srinivasa Murthy VN
Updated On : 2 Aug 2013, 1:33 am

ಕ.ಪ್ರ.ವಾರ್ತೆ ರಾಮನಗರ ಆ.1
ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆರೋಗ್ಯ ಅತಿ ಮುಖ್ಯ. ದೇಶದ ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳು ನಮ್ಮ ಆಸ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡುವ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ ಎಂದು  ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಜಿ.ಪಂ. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಬಾಲಕಿಯರ ಪ್ರೌಢಶಾಲೆಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕ್ಷೀರ ಭಾಗ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೇಕಡ 40ರಷ್ಟು ಮಕ್ಕಳಲ್ಲಿ ರಕ್ತಹೀನತೆ ಮತ್ತು ಪೌಷ್ಟಿಕಾಂಶದ ಕೊರತೆ ಕಂಡು ಬಂದಿದೆ ಎಂದು ಹೇಳಿದರು.  
ಈ ಕಾರಣಕ್ಕೆ ಸರ್ಕಾರವು ಅಂಗನವಾಡಿಯಿಂದ 10ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಕೆನೆ ಭರಿತ ಹಾಲಿನ ಪುಡಿಯಿಂದ ತಯಾರಿಸಿದ ಹಾಲು ವಿತರಣಾ ಯೋಜನೆಯನ್ನು ಜಾರಿಗೊಳಿಸಿದೆ. ಇದು ಮಕ್ಕಳ ಆರೋಗ್ಯ ಕಾಪಾಡುವ ಜತೆಗೆ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೂ ನಾಂದಿ ಹಾಡಿದೆ ಎಂದರು.
ಮಕ್ಕಳಿಗೆ ವಿತರಿಸುವ ಹಾಲನ್ನು ಶಿಕ್ಷಕರು ಪರಿಶೀಲಿಸಬೇಕು. ವಾರದಲ್ಲಿ ಮೂರು ದಿನ ಪ್ರತಿ ಮಗುವಿಗೆ ಒಮ್ಮೆ 18 ಗ್ರಾಂ ಹಾಲಿನ ಪುಡಿ ಬಳಸಿ 150 ಗ್ರಾಂ ಹಾಲನ್ನು ವಿತರಿಸಬೇಕು. ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆ ಮಕ್ಕಳು ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಎಂದು ವೆಂಕಟೇಶ್ ಕರೆ ನೀಡಿದರು.  
1 ಲಕ್ಷ ಮಕ್ಕಳು:  ರಾಮನಗರ ಜಿಲ್ಲೆಯ 1533 ಶಾಲೆಗಳ 1,01,758 ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಹ್ಲಾದಗೌಡ ತಿಳಿಸಿದರು. ಸಮಾರಂಭದಲ್ಲಿ ಬಿಇಒ ಮುನಿಕೆಂಪೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಎಸ್.ಎಂ.ಚಂದ್ರ, ಡಯಟ್ ಪ್ರಾಂಶುಪಾಲರಾದ  ಇಂದ್ರಾಣಿ, ಶಿಕ್ಷಣಾಧಿಕಾರಿ ರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರೇಗೌಡ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಸಿ.ವಿ.ಜಯಣ್ಣ ಭಾಗವಹಿಸಿದ್ದರು.

ಚನ್ನಪಟ್ಟಣದಲ್ಲಿ ಯೋಜನೆಗೆ ಚಾಲನೆ
ಚನ್ನಪಟ್ಟಣ: ಸರ್ಕಾರದ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಯೋಜನೆಗೆ ತಾಲೂಕಿನಲ್ಲಿ ಗುರವಾರ ಚಾಲನೆ ನೀಡಲಾಗಿದ್ದು 22025 ಶಾಲಾ ಮಕ್ಕಳು 13938 ಅಂಗನವಾಡಿ ಮಕ್ಕಳು ಕ್ಷೀರಭಾಗ್ಯ ಯೋಜನೆಗೆ ಒಳ ಪಡಲಿದ್ದಾರೆ.
ಪಟ್ಟಣದ ಮಂಗಳವಾರ ಪೇಟೆ ಸರ್ಕಾರಿ ಶಾಲೆಯಲ್ಲಿ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಮತ್ತು ಬೆಂಗಳೂರು ಹಾಲು ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು.
ಶಾಲಾಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಡಾ. ದಯಾನಂದ್ ಮಾತನಾಡಿ, ಮಕ್ಕಳಲ್ಲಿ ಪೌಷ್ಟಿಕತೆ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದ್ದು ಅದರಂತೆ ಸರ್ಕಾರ ಈಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಈ ಯೋಜನೆಯಿಂದಾಗಿ ಮಕ್ಕಳಿಗೆ ಸಮತೋಲನ ಪೌಷ್ಟಿಕ ದೊರೆಯಲಿದ್ದು ಇದು ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಸನಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು. ಶಾಲಾಮಕ್ಕಳು ಸರ್ಕಾರದ ಈ ಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಳ್ಳಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ, ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೇರಿದ 22025 ಮಕ್ಕಳು ಕ್ಷೀರಭಾಗ್ಯ ಯೋಜನೆಗೆ ಒಳಪಡಲಿದ್ದು, ಎಲ್ಲಾ ಮಕ್ಕಳಿಗೂ ವಾರದಲ್ಲಿ ಮೂರು ದಿನ ಹಾಲು ವಿತರಣೆ ಮಾಡುವುದಾಗಿ ತಿಳಿಸಿದರು.
ಎಲ್ಲಾ ಶಾಲೆಗಳಿಗೂ ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು ಸ್ಟೀಲ್ ಅಥವಾ ದಪ್ಪ ತಳ ಇರುವ ಅಲ್ಯುಮೀನಿಯಂ ಪಾತ್ರೆಯನ್ನು ಕ್ಷೀರಭಾಗ್ಯ ಯೋಜನೆಗಾಗಿ ಖರೀದಿಸುವಂತೆ ತಿಳಿಸಲಾಗಿದೆ, ಅದರಂತೆ ಕ್ಷೀರಭಾಗ್ಯ ಯೋಜನೆಯಲ್ಲಿ ಯಾವುದೇ ಲೋಪ ವಾಗದಂತೆ ಜಾರಿಗೆತರಲು ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ ಎಂದರು.
ಅನುದಾನ ಬಳಸಿಕೊಳ್ಳಿ: ಕ್ಷೀರಭಾಗ್ಯ ಯೋಜನೆಗೆ ಅಗತ್ಯವಿರುವ ಸಲಕರಣೆಗಳನ್ನು ಖರೀದಿಸಲು ಎಸ್‌ಡಿಎಂಸಿ ನಿಧಿಯಲ್ಲಿ ಲಭ್ಯವಿರುವ ಅನುದಾನ ಬಳಸಿ ಕೊಳ್ಳಲು ಸೂಚಿಸಲಾಗಿದೆ, ಅನುದಾನ ಇಲ್ಲದ ಶಾಲೆಗಳಲ್ಲಿ ಅನುದಾನ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದರು.
ಶಾಲಾಮಕ್ಕಳಿಗೆ ಕೆನೆಬರಿತ ಹಾಲನ್ನು ನೀಡಲಿದ್ದು ಪ್ರತಿಯೊಂದು ಮಗುವಿಗೆ 18 ಗ್ರಾಂನಂತೆ 4797 ಕೆಜಿ ಹಾಲಿನ ಪುಡಿಯನ್ನು ತಾಲೂಕಿನ ಎಲ್ಲಾ ಶಾಲೆಗಳಿಗೆ ವಿತರಣೆ ಮಾಡಲಿರುವುದಾಗಿ ಅವರು ತಿಳಿಸಿದರು.
ಅಂಗನವಾಡಿ ಮಕ್ಕಳಿಗೂ ಹಾಲು: ತಾಲೂಕಿನ ಎಲ್ಲಾ ಅಂಗನವಾಡಿ ಮಕ್ಕಳಿಗೂ ಕ್ಷೀರಭಾಗ್ಯ ಯೋಜನೆಯಡಿ ಹಾಲುವಿತರಣೆ ಮಾಡಲಿದ್ದು 3 ರಿಂದ 6 ವರ್ಷದೊಳಗಿನ 5818 ಮಕ್ಕಳಿಗೆ ಅಂಗನವಾಡಿಯಲ್ಲಿ  6 ತಿಂಗಳಿಂದ 3 ವರ್ಷದೊಳಗಿನ 8120 ಮಕ್ಕಳಿಗೆ ಅವರ ಮನೆಗೆ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು.
ಶುದ್ಧತೆ ಕಾಪಾಡಿ: ಕಾರ್ಯಕ್ರಮದಲ್ಲಿ ಮಾತನಾಡಿದ ಬಮೂಲ್ ಉಪ ವ್ಯವಸ್ಥಾಪಕ ಡಾ.ಶ್ರೀಧರ್ ನಮ್ಮ ಒಕ್ಕೂಟದ ವತಿಯಿಂದ ನೀಡುವ ಹಾಲನ್ನು ಸಮರ್ಪಕವಾಗಿ ಬಳಕೆ ಮಾಡಿ ಮಕ್ಕಳಿಗೆ ಶುದ್ಧವಾಗಿ ಪೂರೈಕೆ ಮಾಡಬೇಕೆಂದು ಶಾಲಾ ಶಿಕ್ಷಕರು ಮತ್ತು ಬಿಸಿಯೂಟ ಕಾರ್ಯಕರ್ತರಿಗೆ ತಿಳಿಸಿದರು. ಹಾಲಿನ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುದಿಸಬೇಕು, ಹಾಲನ್ನು ಕಾಯಿಸುವಾಗ  ಆಗಾಗ ಸೌಟಿನ ಸಹಾಯದಿಂದ ಮಿಶ್ರಣ ಮಾಡುತ್ತಿರಬೇಕು, ಯಾವುದೇ ಕ್ರಿಮಿ ಕೀಟಗಳು ಹಾಲಿನೊಳಗೆ ಬೀಳದಂತೆ ಎಚ್ಚರ ವಹಿಸ ಬೇಕೆಂದು ತಿಳಿಸಿದರು. ನಮ್ಮ ಒಕ್ಕೂಟದ ವತಿಯಿಂದ ವಿತರಣೆ ಮಾಡುವ ಹಾಲುಪುಡಿಯಲ್ಲಿ ಯಾವುದಾದರೂ ದೋಷಗಳು ಕಂಡು ಬಂದಲ್ಲಿ ತಮ್ಮ ಕಚೇರಿಯನ್ನಾಗಲಿ, ಇಲ್ಲ ಹಾಲಿನ ಪುಡಿ ಪಟ್ಟಣದ ಮೇಲೆ ನಮೂದಿಸಿರುವ ದೂರವಾಣಿ ಸಂಖ್ಯೆಗಾಗಲಿ ಕರೆ ಮಾಡಿ ತಿಳಿಸುವಂತೆ ಸೂಚಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವೀರಭದ್ರಪ್ಪ, ಬಮೂಲ್ ವಿಸ್ತರಣಾಧಿಕಾರಿ ಶಿವಪ್ರಸನ್ನ, ಮುಖ್ಯ ಶಿಕ್ಷಕ ವಸಂತಕುಮಾರ್, ಶಿಕ್ಷಣ ಸಂಯೋಜಕ ಹರಿದಾಸ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರೇವಣ್ಣ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸತ್ಯನಾರಾಯಣ ಮುಂತಾದವರು ಉಪಸ್ಥಿತರಿದ್ದರು.

ಬಮೂಲ್ ನಿರ್ದೇಶಕರ ಭೇಟಿ
ಕ್ಷೀರಭಾಗ್ಯ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾದ ಮಂಗಳವಾರ ಪೇಟೆ ಶಾಲೆಗೆ ಭೇಟಿ ನೀಡಿದ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಈ ಯೋಜನೆಯಿಂದ ಮಕ್ಕಳಿಗೆ ಪೌಷ್ಟಿಕಾಂಶ ದೊರಕುವ ಜತೆಗೆ  ರೈತರಿಗೆ ಅನುಕೂಲವಾಗಲಿದೆ ಎಂದರು. ಪ್ರತಿ ದಿನ ಮಾರಾಟವಾಗದೆ ಉಳಿಯುತ್ತಿರವ 3.50 ಲಕ್ಷ ಲೀಟರ್ ಹಾಲನ್ನು ಪುಡಿಯಾಗಿ ಪರಿವರ್ತಿಸುತ್ತಿದ್ದು ಕ್ಷೀರಭಾಗ್ಯ ಯೋಜನೆಗೆ ಹಾಲಿನಪುಡಿ ಬಳೆಕೆಯಾಗುವುದರಿಂದ ಒಕ್ಕೂಟಕ್ಕೆ, ಹಾಲು ಉತ್ಪಾದಕರಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಬಮೂಲ್‌ನಿಂದ ಶಾಲಾಮಕ್ಕಳಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತರಲು ಅವಕಾಶವಿದ್ದು ಚರ್ಚಿಸಿ ಅಗತ್ಯ ಸಲಕರಣೆಗಳನ್ನು ನೀಡಲಿರುವುದಾಗಿ ಅವರು ತಿಳಿಸಿದರು. ತಾಲೂಕಿನಲ್ಲಿ  ಕ್ಷೀರಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರುವ ಅಗತ್ಯತೆ ಇದ್ದು ಶಿಕ್ಷಣ ಇಲಾಖೆ ಬಮೂಲ್‌ನೊಂದಿಗೆ ಸಹಕರಿಸುವ ಅಗತ್ಯತೆ ಇದೆ ಎಂದರು.

ಅರ್ಧ ಮಾತ್ರ ಜಾರಿ
ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಜಾರಿಗೆ ತರಲು 4.7 ಟನ್ ಹಾಲಿನ ಪುಡಿಯ ಅಗತ್ಯತೆ ಇದ್ದು ಇದುವರೆಗೆ 2.2 ಟನ್ ಮಾತ್ರ ಪೂರೈಕೆಯಾಗಿರುವುದರಿಂದ ತಾಲೂಕಿನ ಅರ್ಧಶಾಲೆಗಳಿಗೆ ಮಾತ್ರ ವಿತರಣೆ ಮಾಡಲಾಗಿದೆ. ಮುಂದಿನ ಸೋಮುವಾರದಿಂದ ಎಲ್ಲಾ ಶಾಲೆಗಳಲ್ಲಿ ಸಮರ್ಪಕವಾಗಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತರಲಿರುವುದಾಗಿ ಅಕ್ಷರದಾಸೋಹ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮಾಗಡಿ: ಮಕ್ಕಳಿಗೆ ಕ್ಷೀರಭಾಗ್ಯ ಲಭ್ಯವಾಗದೆ ನಿರಾಸೆ
ಮಾಗಡಿ:  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆ ತಾಲೂಕಿನ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಗುರುವಾರ ಲಭ್ಯವಾಗದೆ ಮಕ್ಕಳನ್ನು ನಿರಾಸೆಗೊಳಿಸಿದೆ.  ಸಂಜೆ 5 ಗಂಟೆಯಾದರೂ ಕೆ.ಎಂ.ಎಫ್‌ನಿಂದ ಹಾಲಿನ ಫೌಡರ್  ಸರಬರಾಜಾಗಲಿಲ್ಲ. ಬೆಳಿಗ್ಗೆ 9 ಗಂಟೆಗೆ ಹಾಲಿನ ಫೌಡರ್ ಬರಲಿದೆ. ಎಲ್ಲಾ ಅಂಗನವಾಡಿ ಮತ್ತು 1 ರಿಂದ 10ನೇ ತರಗತಿ ಶಾಲಾ ಮಕ್ಕಳಿಗೆ ವಿತರಣೆ ಮಾಡಲು ಶಾಲಾ ಸಿಬ್ಬಂದಿಗಳು ಸಿದ್ಧತೆಯಲ್ಲಿದ್ದರು. ಇತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೀರ ಭಾಗ್ಯ ಯೋಜನೆಯನ್ನು ಪಟ್ಟಣದ ಜಿಕೆಬಿಎಂಎಸ್ ಶಾಲೆಯಲ್ಲಿ ನೀಡಲು ಸಕಲ ಸಿದ್ಧತೆಯಿಂದ ಕಾದು ಕುಳಿತ್ತಿದ್ದರು. ಸಂಜೆಯಾದರೂ ಬಾರದ ಕಾರಣ ಬಿಇಓ ಇತ್ತ ಕಂಗಾಲಾಗಿದ್ದರು. ಇತ್ತ ಬೆಂಗಳೂರು ಹಾಲು ಒಕ್ಕೂಟದ ಸೋಲೂರು ಶಿಥಿಲೀಕೇಂದ್ರದ ಉಪ ವ್ಯವಸ್ಥಾಪಕ ಡಾ. ಮೋಹನ್ ಕುಮಾರ್, ಸಹಾಯಕ ವ್ಯವಸ್ಥಾಪಕ ವರದರಾಜು ಇತರರು ಸಹ ಬಿಇಓ ಕಚೇರಿಯಲ್ಲಿ ಬೀಡು ಬಿಟ್ಟು ಕೆ.ಎಂ.ಎಫ್‌ನಿಂದ ಹಾಲಿನ ಪೌಡರ್ ಸರಬರಾಜಿಗಾಗಿ  ಕಾದು ಕುಳಿತ್ತಿದ್ದರು. ಆದರೂ ಸಂಜೆ 5 ಗಂಟೆಯಾದರು ಹಾಲು ಸರಬರಾಜಾಗಿರಲಿಲ್ಲ.   ಮತ್ತೊಂದೆಡೆ ಕ್ಷೀರ ಭಾಗ್ಯ ಯೋಜನೆಯ ಫಲ ಪಡೆದುಕೊಳ್ಳಲು ಮಕ್ಕಳು ಖುಷಿಯಿಂದ ಮನೆಯಿಂದ ಲೋಟಗಳನ್ನು ಶಾಲಾ ಬ್ಯಾಗಿನಲ್ಲಿಸಿಕೊಂಡು ಶಾಲೆಗೆ ತೆರಳಿದ್ದರು. ಸಂಜೆಯಾದರು ಹಾಲು ಬರಲಿಲ್ಲ, ನಿರಾಸೆಯಿಂದ ಮಕ್ಕಳು ಮನೆಗೆ ತೆರಳಿದ ದೃಶ್ಯ ಕಂಡು ಬಂತು.
ಬಿಇಓ ಪ್ರತಿಕ್ರಿಯೆ: ಅಂಗನವಾಡಿ ಮತ್ತು 1 ರಿಂದ 10ನೇ ತರಗತಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯನ್ನು ಗುರುವಾರವೇ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಕಾರಣಾಂತರದಿಂದ ಸಕಾಲಕ್ಕೆ ಹಾಲಿನ ಪೌಡರ್ ಸ ರಬರಾಜಾಗಲಿಲ್ಲ. ಶುಕ್ರವಾರ ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದು ಬಿಇಓ ರಂಗಸ್ವಾಮಿ  ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement