ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ಪರಿಶೀಲಿಸಿ ನಿರ್ಧಾರ

Srinivasa Murthy VN
Updated On : 2 Aug 2013, 1:34 am

ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಆ. 1
ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಮಂದಿಯ ಬೃಹತ್ ನಿಯೋಗ ಗುರುವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಸರ್ಕಾರದ ಪ್ರಮುಖ ಗಣ್ಯರನ್ನು ಭೇಟಿ ಮಾಡಿ ಹಕ್ಕೊತ್ತಾಯದ ಮನವಿ ಸಲ್ಲಿಸಿದೆ.
ಬೆಳಿಗ್ಗೆ ಇಲ್ಲಿನ ಜಯಚಾಮರಾಜೇಂದ್ರ ವೃತ್ತದಿಂದ ಹಲವಾರು ಸಂಘಟನೆಗಳ ನೂರಾರು ಮಂದಿ ಒಟ್ಟಾಗಿ ಸಿಎಂ ಗೃಹ ಕಚೇರಿಗೆ ತೆರಳಿದರು. ಸಿಎಂ ಸಿದ್ಧರಾಮಯ್ಯ ಅವರಿಗೆ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಲು ಇರುವ ಅರ್ಹತೆಗಳ ಮಾಹಿತಿ ಒಳಗೊಂಡ 16 ಅಂಶಗಳ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಿಎಂ ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ದೊಡ್ಡಬಳ್ಳಾಪುರ ಕಳೆದ 55 ವರ್ಷಗಳಿಂದ ಉಪವಿಭಾಗ ಕೇಂದ್ರವಾಗಿದೆ. ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಸೇರಿದಂತೆ ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಿಗೂ ಇದೊಂದೇ ಕಂದಾಯ ಉಪವಿಭಾಗ. ಅಲ್ಲದೆ ಏಕೈಕ ನಗರಸಭೆ, ಅತಿದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಡಿವೈಎಸ್ಪಿ ಕಚೇರಿ, ಜಿಲ್ಲಾ ನ್ಯಾಯಾಲಯ ಒಳಗೊಂಡಂತೆ ಜನಸಂಖ್ಯೆ ಮತ್ತು ವಿಸ್ತ್ರೀರ್ಣದಲ್ಲೂ ಅತಿದೊಡ್ಡ ತಾಲೂಕಾಗಿದೆ.
ಜಿಲ್ಲೆಯ 4 ತಾಲೂಕುಗಳಿಂದಲೂ ಸಮರ್ಪಕ ರಸ್ತೆ ಸಾರಿಗೆ ಒಳಗೊಂಡಿರುವ, 1 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ದೊಡ್ಡ ನಗರ ಇದಾಗಿದ್ದು, ಬ್ರಾಡ್‌ಗೇಜ್ ರೈಲು ಮಾರ್ಗ ಮತ್ತು ಉತ್ತಮ ಗ್ರಾಮಾಂತರ ಸಂಪರ್ಕ ರಸ್ತೆಗಳನ್ನು ಹೊಂದಿದೆ. ಕೈಗಾರಿಕಾ ಪ್ರದೇಶ ಸುಸಜ್ಜಿತವಾಗಿ ಬೆಳೆದಿದ್ದು ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಜಿಲ್ಲೆ ಮತ್ತು ಹೊರ ಜಿಲ್ಲೆಗಳ 35 ಸಾವಿರಕ್ಕೂ ಅಧಿಕ ಮಂದಿ ದೊಡ್ಡಬಳ್ಳಾಪುರದಲ್ಲಿ ಉದ್ಯೋಗಾವಕಾಶ ಪಡೆದಿದ್ದಾರೆ. ಅಲ್ಲದೆ ಜಿಲ್ಲಾ ಕೇಂದ್ರವಾಗಿ ಬೆಳೆಯಲು ಸಮರ್ಪಕ ಸ್ಥಳಾವಕಾಶ ಮತ್ತು ಅಭಿವೃದ್ಧಿ ವಿಸ್ತರಣೆಗೆ ಪೂರಕ ವಾತಾವರಣ ಹೊಂದಿದೆ. ಬೆಂಗಳೂರಿನ ಅವಲಂಬನೆ ತಪ್ಪಿಸಲು ದೊಡ್ಡಬಳ್ಳಾಪುರವನ್ನು ಕೂಡಲೇ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಒತ್ತಾಯಿಸಲಾಯಿತು.
ಪರಿಶೀಲಿಸಿ ಸೂಕ್ತ ಕ್ರಮ: ಮನವಿ ಪತ್ರ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಘೋಷಣೆಯ ಒತ್ತಾಯದ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಸ್ತುಸ್ಥಿತಿ ಅಧ್ಯಯನ ಮತ್ತು ಇತರ ವಿಚಾರಗಳ ಬಗ್ಗೆ ಮಾಹಿತಿ ಪಡೆದು ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.
ಎಚ್‌ಡಿಕೆ ಭೇಟಿ: ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ದೊಡ್ಡಬಳ್ಳಾಪುರ ಜನರ ಬೇಡಿಕೆ ಬಗ್ಗೆ ಸದನದಲ್ಲಿ ಮಾತನಾಡುವುದಾಗಿ ಅವರು ಭರವಸೆ ನೀಡಿದರು.
ಮುಖ್ಯ ಕಾರ್ಯದರ್ಶಿಗಳಿಗೆ ಮನವಿ: ಇದೇ ಸಂದರ್ಭದಲ್ಲಿ ವಿಧಾನಸೌಧಕ್ಕೆ ತೆರಳಿದ ಸಮಿತಿಯ ಕೆಲ ಸದಸ್ಯರು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಕಂದಾಯ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಿಯೋಗದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ, ಸಂಚಾಲಕರು, ವಿವಿಧ ಕನ್ನಡಪರ, ಪ್ರಗತಿಪರ, ದಲಿತ, ರೈತ ಮತ್ತು ಮಹಿಳಾ ಸಂಘಟನೆಗಳ ಮುಖಂಡರು, ನಗರಸಭೆಯ ಹಲವು ಸದಸ್ಯರು, ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇವರೇನಂತಾರೆ...?
ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಲು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು. ಎಲ್ಲ ಬಗೆಯ ಮಾಹಿತಿ ಮತ್ತು ಅಂಕಿ-ಅಂಶದ ಆಧಾರದಲ್ಲಿ ಜಿಲ್ಲಾ ಕೇಂದ್ರ ಘೋಷಣೆ ಮಾಡಬೇಕಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕು ಎಂಬುದು ನ್ಯಾಯಯುತ ಬೇಡಿಕೆ. ಈ ಬಗ್ಗೆ ಸಿಎಂ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನು ಘೋಷಿಸಲು ನನ್ನ ಬೆಂಬಲವಿದೆ .
-ಆರ್.ಎಲ್.ಜಾಲಪ್ಪ, ಮಾಜಿ ಕೇಂದ್ರ ಸಚಿವ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರ ಘೋಷಣೆ ವಿಚಾರವಾಗಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನು ಘೋಷಿಸಬೇಕು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಸಿಎಂ ನಮ್ಮ ಬೇಡಿಕೆಯನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ.
- ಟಿ.ವೆಂಕಟರಮಣಯ್ಯ, ಶಾಸಕರು, ದೊಡ್ಡಬಳ್ಳಾಪುರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement