ಮಾಸ್ಟರ್ ಮೈಂಡ್ ಚಿದಾನಂದ ಅಂತಿಂಥ ಆಸಾಮಿಯಲ್ಲ
ಈ ಅಧಿಕಾರಿ ಪ್ರಾಧಿಕಾರದ ಪ್ರಭಾರ ಅಧ್ಯಕ್ಷ,್ತ ಆಡಳಿತಾಧಿಕಾರಿ ಹುದ್ದೆಗೆ ಜಿಲ್ಲಾಧಿಕಾರಿ ಬರುವುದನ್ನೇ ತಡೆ ಹಿಡಿದ ಭೂಪ!
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಆ. 1
ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಬಹುಕೋಟಿ ವಂಚನೆ ಪ್ರಕರಣದ ಮಾಸ್ಟರ್ ಮೈಂಡ್ ಚಿದಾನಂದ ಅಂತಿಂಥ ಆಸಾಮಿಯಲ್ಲ. ಈ ಅಧಿಕಾರಿಯು ಪ್ರಾಧಿಕಾರದ ಪ್ರಭಾರ ಅಧ್ಯಕ್ಷ ಮತ್ತು ಆಡಳಿತಾಧಿಕಾರಿ ಹುದ್ದೆಗೆ ಜಿಲ್ಲಾಧಿಕಾರಿ ಬರುವುದನ್ನೇ ತಡೆ ಹಿಡಿದ ಭೂಪ.
ಜಿಲ್ಲಾ ಮಟ್ಟದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸರ್ಕಾರದಿಂದ ನಾಮಕರಣಗೊಂಡ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ನಿರ್ದೇಶಕರು ರಾಜಿನಾಮೆ ನೀಡಿದ ಸಂದರ್ಭದಲ್ಲಿ ಪ್ರಭಾರ ಅಧ್ಯಕ್ಷ ಹಾಗೂ ಆಡಳಿತಾಧಿಕಾರಿಯಾಗಿ ಆಯಾ ಜಿಲ್ಲಾಧಿಕಾರಿ ನೇಮಕ ಸಂಪ್ರದಾಯವಾಗಿದೆ.
ಸತ್ತು ಹೋದ ಸುತ್ತೋಲೆ: ಅಂತೆಯೇ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸರ್ಕಾರಿ ನಾಮಕರಣ ಅಧ್ಯಕ್ಷ ಮತ್ತು ನಿರ್ದೇಶಕರು ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ಪ್ರಭಾರ ಅಧ್ಯಕ್ಷ ಮತ್ತು ಆಡಳಿತಾಧಿಕಾರಿ ಹುದ್ದೆ ವಹಿಸಲು ನಗರಾಭಿವೃದ್ಧಿ ಇಲಾಖೆಯು 2013ರ ಜೂ.10ರಂದು ಸುತ್ತೋಲೆ ಹೊರಡಿಸಿತ್ತು.
ಆದರೆ, ಚಿದಾನಂದ ನಗರಾಭಿವೃದ್ಧಿ ಇಲಾಖೆ ಸುತ್ತೋಲೆಯನ್ನು ಪಾಲಿಸಲಿಲ್ಲ. ಬದಲಿಗೆ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವಾಲಯ ಮತ್ತು ಇಲಾಖೆ ಮಟ್ಟದಲ್ಲೇ ದೊಡ್ಡಮಟ್ಟದ ಲಾಬಿಗೆ ಇಳಿದು, ಸುತ್ತೋಲೆ ಬದಲಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
ಚಿದಾನಂದ ಚಿತಾವಣೆ: ಬಹುಕೋಟಿ ಹಗರಣದಲ್ಲಿ ಸಿಕ್ಕಿಬಿದ್ದು ನ್ಯಾಯಾಂಗ ಕಸ್ಟಡಿಯಲ್ಲಿರುವ ಚಿದಾನಂದ ನಡೆಸಿದ ಚಿತಾವಣೆಯ ಫಲವಾಗಿ 2013ರ ಜೂ.26ಕ್ಕೆ ನಗರಾಭಿವೃದ್ಧಿ ಇಲಾಖೆಯಿಂದ ಮತ್ತೊಂದು ಸುತ್ತೋಲೆ ಹೊರ ಬಿದ್ದಿತು. ಅದರಲ್ಲಿ ಪ್ರಭಾರ ಅಧ್ಯಕ್ಷ ಮತ್ತು ಆಡಳಿತಾಧಿಕಾರಿ ಹುದ್ದೆಗೆ ಜಿಲ್ಲಾಧಿಕಾರಿ ಪರಿಗಣನೆಯನ್ನು ಕೈಬಿಡಲಾಗಿತ್ತು.
2ನೇ ಸುತ್ತೋಲೆಯಲ್ಲಿ ರಾ-ಚ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿಯ ಅಧಿಕಾರವನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಬಿಎಂಆರ್ಡಿಎ)ದ ಆಯುಕ್ತರಿಗೆ ವಹಿಸಲು ಸೂಚಸಲಾಗಿತ್ತು. ತನ್ನದೇ ಚಿತಾವಣೆಯಿಂದ ಬಂದ ಪರಿಷ್ಕೃತ ಸುತ್ತೋಲೆಯನ್ನು ಚಿದಾನಂದ ಚಾಚೂ ತಪ್ಪದೆ ಪಾಲಿಸಿದ್ದಾರೆ.
ಕರಾಮತ್ತು ಏತಕ್ಕಾಗಿ: ರಾಮನಗರದಲ್ಲಿರುವ ಪ್ರಾಧಿಕಾರದ ಪ್ರಭಾರ ಅಧ್ಯಕ್ಷ ಮತ್ತು ಆಡಳಿತಾಧಿಕಾರಿ ಹುದ್ದೆಗೆ ನಾಲ್ಕು ಹೆಜ್ಜೆ ಸನಿಹದಲ್ಲಿರುವ ಜಿಲ್ಲಾಧಿಕಾರಿಯ ಬದಲು ದೂರದ ಬೆಂಗಳೂರಿನ ಪ್ರಾಧಿಕಾರಮೊಂದರ ಆಯುಕ್ತರು ನೇಮಕ ಏಕೆ ಬೇಕು ಎನ್ನುವ ವಿಷಯದಲ್ಲಿ ನಗರಾಭಿವೃದ್ಧಿ ಇಲಾಖೆ ಹಿಂದು ಮುಂದು ನೋಡದೆ ಸುತ್ತೋಲೆ ಹೊರಡಿಸಿದೆ.
ಚಿದಾನಂದ ಇಷ್ಟೆಲ್ಲಾ ಕರಾಮತ್ತು ನಡೆಸಿರುವ ಹಿಂದೆ ದುರುದ್ದೇಶ ಅಡಗಿರುವುದಂತೂ ಸ್ಪಷ್ಟ. ಒಂದೊಮ್ಮೆ ಜಿಲ್ಲಾಧಿಕಾರಿಯೇ ರಾ-ಚ ಪ್ರಾಧಿಕಾರದ ಮುಖ್ಯಸ್ಥರಾದರೆ, ಇಲ್ಲಿರುವ ಕಡತಗಳನ್ನು ಕೆದಕಿ ಕರ್ಮಕಾಂಡ ಬಯಲಿಗೆಳೆಯಬಹುದು. ಅದೇ ದೂರದಲ್ಲಿರುವ ಅಧಿಕಾರಿಯಾದರೆ ಇತ್ತ ಸುಳಿಯುವುದಿಲ್ಲ ಎನ್ನುವುದು ಚಿದಾನಂದ ಲೆಕ್ಕಾಚಾರವಾಗಿದೆ.
ಡಿಸಿ ಅಸಮಾಧಾನ: ರಾ-ಚ ಪ್ರಾಧಿಕಾರದ ಪ್ರಭಾರ ಅಧ್ಯಕ್ಷ ಮತ್ತು ಆಡಳಿತಾಧಿಕಾರಿ ಹುದ್ದೆ ವಹಿಸುವಂತೆ ಬಂದ ಸುತ್ತೋಲೆಯು ಎರಡೇ ವಾರದಲ್ಲಿ ಬದಲಾದ ಬಗ್ಗೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರಿಗೆ ಅಸಮಾಧಾನ
ಇದ್ದೇ ಇತ್ತು. ಆದರೆ, ಅವರು ಯಾರ ಬಳಿಯೂ ತೋಡಿಕೊಳ್ಳುವ ಗೋಜಿಗೆ ಹೋಗಲಿಲ್ಲವಷ್ಟೇ. ಪರಿಷ್ಕೃತ ಸುತ್ತೋಲೆ ಬಂದಾಗಲೂ ಶ್ರೀರಾಮರೆಡ್ಡಿ ಚಕಾರವೆತ್ತಲಿಲ್ಲ. ಆದರೆ, ಬಹುಕೋಟಿ ಹಗರಣದ ಕರ್ಮಕಾಂಡ ಬಯಲಾದ ಬಳಿಕವಂತೂ ತಮಗೆ ಕಳಂಕದ ಜತೆಗೆ ತಲೆನೋವು ತಪ್ಪಿತಲ್ಲಾ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಹಾಗೇನಾದರೂ ಇವರೇ ಮುಖ್ಯಸ್ಥರಾಗಿದ್ದರೆ ಪ್ರಕರಣದ ದೂರುದಾರ, ಕೊಳ್ಳೆ ಹೋಗಿರುವ ಸಂಸ್ಥೆಯ ವಾರಸುದಾರ ಇವರೇ ಆಗಿರುತ್ತಿದ್ದರು.
ಸುಳಿಯದ ಅಧ್ಯಕ್ಷರು
ಬಹುಕೋಟಿ ಹಗರಣವು ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆನ್ನುವ ಕೂಗು ಎದ್ದಿದ್ದರೂ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿ ಮಾತ್ರ ರಾಮನಗರದತ್ತ ಸುಳಿದೇ ಇಲ್ಲ. ಎಲ್ಲವನ್ನೂ ನಗರಾಭಿವೃದ್ಧಿ ಕೋಶದ ತಲೆಗೆ ಕಟ್ಟಿ ಕೈ ತೊಳೆದುಕೊಂಡಿದ್ದಾರೆ.
ಇನ್ನೂ ಆಗಿಲ್ಲ ಅಮಾನತು
ಮಂಡ್ಯದ ಮುಡಾದಲ್ಲಿ ನಡೆದಿರುವ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಅಲ್ಲಿನ ಆಯುಕ್ತ ಎಚ್.ಎಸ್. ಶಿವರಾಮ್ ಸೇವೆಯಿಂದ ಅಮಾನತುಗೊಂಡಿದ್ದಾರೆ. ಅವರ ಜಾಮೀನು ಅರ್ಜಿಯೂ ತಿರಸ್ಕೃತಗೊಂಡಿದೆ. ಆದರೆ, ಚಿದಾನಂದ ಅಮಾನತಿಗೆ ಜಿಲ್ಲಾಧಿಕಾರಿ ಮಾಡಿರುವ ಶಿಫಾರಸು ಅರ್ಜಿಗೆ ಪ್ರತ್ಯುತ್ತರವೇ ಇಲ್ಲ. ನ್ಯಾಯಾಂಗ ಕಸ್ಟಡಿಗೆ ಹೋಗಿದ್ದರೂ ಚಿದಾನಂದ ಆಸ್ಪತ್ರೆ ಸೇರಿದ್ದಾರೆ.
ಮರು ಲೆಕ್ಕ ಪರಿಶೋಧನೆ
ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ 2008 ರಿಂದ 2013ರವರೆಗೆ 5 ವರ್ಷದ ಅವಧಿಯ ಎಲ್ಲ ವ್ಯವಹಾರಗಳ ಮರು ಲೆಕ್ಕ ಪರಿಶೋಧನೆ ಬುಧವಾರದಿಂದಲೇ ಪ್ರಾರಂಭಗೊಂಡಿದೆ. ರಾಜ್ಯ ಲೆಕ್ಕಪತ್ರ ಇಲಾಖೆ ನೀಡಿರುವ ವಿಶೇಷ ಅನುಮತಿ ಮೇರೆಗೆ ಜಿಲ್ಲಾಡಳಿತ ಶಾಖೆಯಲ್ಲಿರುವ ಲೆಕ್ಕಪತ್ರ ಅಧಿಕಾರಿಗಳು ಮರು ಲೆಕ್ಕಪರಿಶೋಧನೆಯಲ್ಲಿ ನಿರತರಾಗಿದ್ದಾರೆ. ಮರು ಲೆಕ್ಕ ಪರಿಶೋಧನೆ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ವಶದಲ್ಲಿದ್ದ ಎಲ್ಲ ಕಡತಗಳು, ಚೆಕ್ ಪುಸ್ತಕ ಸಹಿತ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲೆಕ್ಕಪತ್ರ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಅಂತೆಯೇ ದಾಖಲೆ ನಾಶವಾಗದಂತೆ ಹದ್ದಿನ ಕಣ್ಣಿಟ್ಟು ಪೊಲೀಸರು ಆಂತರಿಕ ಲೆಕ್ಕ ಪರಿಶೋಧನೆ ಪ್ರಕ್ರಿಯೆ ಗಮನಿಸುತ್ತಿದ್ದಾರೆ.