ಚುನಾವಣಾ ಸಿಬ್ಬಂದಿಗೆ ಒಂದು ದಿನದ ತರಬೇತಿ
ಕ.ಪ್ರ.ವಾರ್ತೆ ಮಾಗಡಿ ಆ.2
ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಚುನಾವಣಾ ಕಾರ್ಯಗಳಿಗೆ ನೇಮಕಗೊಂಡಿರುವ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ಚುನಾವಣಾಧಿಕಾರಿ ಎಂ.ವಿ. ವೈಶಾಲಿ ಅಧ್ಯಕ್ಷತೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಚುನಾವಣಾ ಸಿಬ್ಬಂದಿಗೆ ಮತಯಂತ್ರ ಬಳಕೆ, ಬ್ಯಾಲೆಟ್ ಪೇಪರ್ ಅಳವಡಿಕೆ ಸೇರಿದಂತೆ ಚುನಾವಣೆಯ ಸಮಗ್ರ ಕಾರ್ಯಕ್ರಮಗಳನ್ನು ಪ್ರಾಯೋಗಿಕವಾಗಿ ತಿಳಿವಳಿಕೆ ನೀಡಲಾಯಿತು. ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ನಾಯಕ್ ತರಬೇತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಚುನಾವಣಾ ಶಿರಸ್ತೇದಾರ್ ಶಿವಕುಮಾರ್, ಕಂದಾಯ ಶಿರಸ್ತೇದಾರ್ ಗುರುಲಿಂಗಯ್ಯ, ಮಹದೇವಯ್ಯ, ಮಹಾಲಿಂಗಯ್ಯ, ವಿಜಯಕುಮಾರ್, ಡಾ.ಸಿ.ರಾಜಶೇಖರ್, ಸಿ.ಬೆಟ್ಟಸ್ವಾಮಿ ಸೇರಿದಂತೆ ನೂರಾರು ಸಿಬ್ಬಂದಿ ಚುನಾವಣಾ ತರಬೇತಿಯಲ್ಲಿದ್ದು ಮಾಹಿತಿ ಪಡೆದರು.
ನಾಳೆ ಪೂಜಾ ಕೈಂಕರ್ಯ
ಮಾಗಡಿ: ಶ್ರೀರಂಗ ಸೇವಾ ಟ್ರಸ್ಟ್ ವತಿಯಿಂದ ಆ.4 ರಂದು ಭಾನುವಾರ ಬೆ. 6.30 ರಿಂದ ಮಧ್ಯಾಹ್ನ 12.30 ರವರೆಗೆ ಐತಿಹಾಸಿಕ ಪ್ರಸಿದ್ಧ ಪ್ರಸನ್ನ ಸೋಮೇಶ್ವರಸ್ವಾಮಿ ದೇವರಿಗೆ ಮಹಾನ್ಯಾಸ ಪೂರ್ವಕ ಶತ ರುದ್ರಾಭಿಷೇಕ ಮತ್ತು ವೇದಬ್ರಹ್ಮ ವಿದ್ವಾನ್ ಡಾ.ಶ್ರೀನಿವಾಸ್ ಮತ್ತು ಶಿಷ್ಯರಿಂದ ರುದ್ರ ಪಾರಾಯಣ ಸೇವೆ ವಿವಿಧ ಪೂಜಾ ಕೈಂಕರ್ಯ ನಡೆಯಲಿದೆ. ಆಸ್ತಿಕ ಭಕ್ತರು ಧಾರ್ಮಿಕ ಪೂಜಾ ಕೈಂಕರ್ಯಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಖಜಾಂಚಿ ಟಿ.ವಿ. ವೆಂಕಟೇಶ್ ಆಯ್ಯಂಗಾರ್ ತಿಳಿಸಿದ್ದಾರೆ.