ಜಾತಿ ಟೀಕೆ ಬಿಟ್ಟು ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿ
ಕ.ಪ್ರ. ವಾರ್ತೆ ರಾಮನಗರ ಆ.2
ಜಾತಿ ಹೆಸರಿನಲ್ಲಿ ಹುಟ್ಟಿಕೊಂಡಿರುವ ಸಂಘಟನೆಗಳು ಅನ್ಯ ಜಾತಿ ಅಥವಾ ಸಂಘಟನೆಗಳನ್ನು ಟೀಕಿಸುವುದನ್ನು ಬಿಟ್ಟು ಜನಾಂಗದ ಶ್ರೇಯೋಭಿವೃದ್ಧಿಗೋಸ್ಕರ ಶ್ರಮಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜಣ್ಣ ಕರೆ ಕರೆ ನೀಡಿದರು.
ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಯಾ ಜನಾಂಗಗಳಿಗೆ ಸಂವಿಧಾನದತ್ತವಾಗಿ ಲಭ್ಯವಿರುವ ಸವಲತ್ತುಗಳನ್ನು ತಲುಪಿಸಲು ಶ್ರಮಿಸಬೇಕು ಎಂದರು.
ಜಾತಿ ಹೆಸರಲ್ಲಿ ಪರಸ್ಪರ ಕಚ್ಚಾಟದಲ್ಲೇ ನಿರತರಾದರೆ ಅಭಿವೃದ್ಧಿ ಹೊಂದುವುದು ಅಸಾಧ್ಯ. ಭಾರತೀಯರೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡು, ಸೌಹಾರ್ಧತೆಯಿಂದ ನಡೆದುಕೊಂಡರೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಉತ್ತಮ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಅತಿಮುಖ್ಯ. ಆದ್ದರಿಂದ ಸಮುದಾಯದ ಎಲ್ಲರಿಗೂ ಶಿಕ್ಷಣ ದೊರಕುವಂತೆ ಮಾಡಲು ಕಂಕಣಬದ್ಧರಾಗಿ ದುಡಿಯಬೇಕು. ಇದು ಹಿಂದುಳಿದ ವರ್ಗಗಳ ಹರಿಕರ ದೇವರಾಜು ಅರಸು ಅವರ ಆಶಯ ಕೂಡ ಆಗಿತ್ತು ಎಂದು ಹೇಳಿದರು.
ಹಿಂದುಳಿದ ಜಾತಿಗೆ ಸೇರಿರುವ ಒಬ್ಬ ಸಾಮಾನ್ಯ ಪ್ರಜೆ ಇಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬೀರಯ್ಯ ಹೇಳಿದರು.
ಜನಾಂಗದವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹಾರಕ್ಕಾಗಿ ಸೂಕ್ತ ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕು. ಹಾಗೂ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಜನಾಂಗದ ಅಭಿವೃದ್ಧಿಗೋಸ್ಕರ ಶ್ರಮಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಎಚ್.ಸಿ. ರಾಜಣ್ಣ ಅವರಲ್ಲಿ ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಟಿ.ವಿ. ನಾರಾಯಣ, ಕಾರ್ಯಾಧ್ಯಕ್ಷ ಎಚ್.ಜಿ. ಗುರುವೇಗೌಡ, ಖಜಾಂಚಿ ಅಶೋಕ್ಕುಮಾರ್, ಪದಾಧಿಕಾರಿಗಳಾದ ಲೋಕೇಶ್, ದೊಡ್ಡಮಂಜು,ಮಹದೇವಯ್ಯ, ನಾಗರಾಜಾಚಾರ್, ಈಶ್ವರ್ ಮತ್ತಿತರರು ಹಾಜರಿದ್ದರು.