ರಾಜಕೀಯ ವೈರಿಗಳ 'ಕೈ' ಕುಲುಕಿದ ಡಿಕೆಶಿ
ಕ.ಪ್ರ.ವಾರ್ತೆ ಬೆಂಗಳೂರು ಆ.2
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ರಾಜಕೀಯ ವೈರಿಗಳು ಪರಸ್ಪರ ಕೈ ಜೋಡಿಸಿದ್ದಾರೆ.
ತಮ್ಮ ಸೋದರ ಡಿ.ಕೆ.ಸುರೇಶ್ ಗೆಲವಿಗೆ ಇನ್ನಿಲ್ಲದ ಪ್ರಯತ್ನ ನಡೆಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಎಲ್ಲ ರಾಜಕೀಯ ವೈರಿಗಳನ್ನು ಭೇಟಿ ಮಾಡಿ ನೆರವು ಯಾಚಿಸಿದ್ದಾರೆ.
ಪಕ್ಷದಲ್ಲಿ ತಮ್ಮ ಕಡು ವಿರೋಧಿ ಎಂದೇ ಪರಿಗಣಿಸಲ್ಪಟ್ಟಿರುವ ಮಾಜಿ ಸಂಸದೆ ತೇಜಸ್ವಿನಿ ಗೌಡ ಹಾಗೂ ಸಮಾಜವಾದಿ ಪಕ್ಷದ ಶಾಸಕ ಸಿ.ಪಿ.ಯೋಗೇಶ್ವರ ಅವರ ಜತೆ ಶಿವಕುಮಾರ್ ಸಂಧಾನಕ್ಕೆ ಮುಂದಾಗಿದ್ದಾರೆ. ಮಾತ್ರವಲ್ಲ ಇಬ್ಬರ ಜತೆಗೂ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದ್ದು, ಸೋದರನ ವಿಜಯಕ್ಕಾಗಿ ರಾಜಕೀಯ ವೈರಿಗಳೊಂದಿಗೆ ಹೊಂದಾಣಿಕೆಗೆ ಸಿದ್ದರಾಗಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ತೇಜಸ್ವಿನಿ ಗೌಡ ಹಾಗೂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದು, ಯಾರಿಗೆ ಅವಕಾಶ ಲಭಿಸಿದರೂ ಪರಸ್ಪರ ನೆರವು ನೀಡುವ ಒಪ್ಪಂದಕ್ಕೆ ಬಂದಿದ್ದರು. ಆದರೆ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ಲಭಿಸುವುದು ಖಾತ್ರಿಯಾದ ತಕ್ಷಣ ಮತ್ತೆ ದೂರವಾಣಿಮೂಲಕ ಶಿವಕುಮಾರ್, ತೇಜಸ್ವಿನಿ ಹಾಗೂ ಯೋಗೇಶ್ವರ ಜತೆ ಮಾತುಕತೆ ನಡೆಸಿದರು.
ಪ್ರತಿಷ್ಠೆ ಪ್ರಶ್ನೆ: ಈ ಉಪಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬ ವರ್ಗವನ್ನು ಮಣಿಸುವ ಹಾಗೂ ತಾವು ಮುಖ್ಯಮಂತ್ರಿಯಾದ ನಂತರ ಎದುರಿಸಿದ ಮೊದಲ ಚುನಾವಣೆಯಲ್ಲೇ ಗೆಲ್ಲುವ ಜವಾಬ್ದಾರಿ ಅವರ ಮೇಲೆ ಇದೆ.
ಅದೇ ರೀತಿ ತಮ್ಮ ರಾಜಕೀಯ ಕಡು ವೈರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಯಲ್ಲಿ ಸೋಲುಂಟು ಮಾಡಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಬಯಕೆ ಡಿ.ಕೆ.ಶಿವಕುಮಾರ್ ಅವರದ್ದು. ಈ ಹಿನ್ನೆಲೆಯಲ್ಲಿ ಪ್ರಯತ್ನ ನಡೆಸಿರುವ ಅವರು ಶತ್ರುಗಳನ್ನು ಮಿತ್ರರನ್ನಾಗಿ ಅಪ್ಪಿಕೊಳ್ಳಲು ಮುಂದಾಗಿದ್ದಾರೆ.
ಈ ಸಂಬಂಧ ಕನ್ನಡಪ್ರಭದ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ' ಚುನಾವಣೆ ಎಂದರೆ ಯುದ್ಧರಂಗ. ಈ ಸಂದರ್ಭದಲ್ಲಿ ಕೆಲವು ತಂತ್ರ- ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಯೋಗೇಶ್ವರ ಹಾಗೂ ತೇಜಸ್ವಿನಿ ಜತೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ: ಯೋಗೇಶ್ವರ
ಲೋಕಸಭಾ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಮತದಾರನ ಮತವೇ ನಿರ್ಣಾಯಕ. ಆದರೆ ನಾನು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ಸಮಾಜವಾದಿ ಪಕ್ಷದ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ ಎಂದು ಶಾಸಕ ಸಿ.ಪಿ.ಯೋಗೇಶ್ವರ ಹೇಳಿದ್ದಾರೆ. ಈ ಸಂಬಂಧ ಕನ್ನಡಪ್ರಭದ ಜತೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಲೋಕಸಭಾ ಚುನಾವಣೆಯಂಥ ಮಹತ್ವದ ಸಂದರ್ಭದಲ್ಲಿ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವುದು ಅಸಾಧ್ಯ. ಏಕೆಂದರೆ ಚುನಾವಣೆ ಎಂಬುದೇ ಒಂದು ಸಾರ್ವತ್ರಿಕ ಪ್ರಕ್ರಿಯೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಬಲ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ನನ್ನ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಹಾಗೆಂದ ಮಾತ್ರಕ್ಕೆ ನಾನು ಅವರೆಲ್ಲರಿಗೂ ಸಹಾಯ ನೀಡುತ್ತೇನೆ ಎನ್ನಲು ಸಾಧ್ಯವೇ ? ಈ ವಿಚಾರದಲ್ಲಿ ರಾಷ್ಟ್ರೀಯ ನಾಯಕರ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಿಂದ ಇಂದು ನಾಮಪತ್ರ
ಬೆಂಗಳೂರು: ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಶನಿವಾರ ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ, ಚುನಾವಣೆಯಲ್ಲಿ ಜೆಡಿಎಸ್ಗೆ ಬೆಂಬಲ ಸೂಚಿಸಲು ಈಗಾಗಲೇ ನಿರ್ಧರಿಸಿರುವುದರಿಂದ ಈ ನಾಮಪತ್ರ ಸಲ್ಲಿಕೆ ಕಾರ್ಯ ಕೇವಲ ನಾಮ್ಕೇವಾಸ್ತೆ ಮಾತ್ರ ಆಗಲಿದ್ದು, ಕೊನೇ ಕ್ಷಣದಲ್ಲಿ ಹಿಂತೆಗೆದುಕೊಳ್ಳುವುದು ಖಚಿತ ಎನ್ನಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗರಾಜ್ ಮತ್ತು ಆನೇಕಲ್ ತಾಲೂಕಿನ ಶಂಕರೇಗೌಡ ಅವರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಳಾಗಿ ಶನಿವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಆದರೆ, ಮಂಡ್ಯ ಕ್ಷೇತ್ರದಿಂದ ಯಾರು ನಾಮಪತ್ರ ಸಲ್ಲಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ಗೆ ಬೆಂಬಲ ಸೂಚಿಸುವ ಬಗ್ಗೆ ಈಗಾಗಲೇ ತೀರ್ಮಾನವಾಗಿದೆ. ಈ ಕುರಿತು ರಾಷ್ಟ್ರೀಯ ನಾಯಕರಿಂದ ಅಧಿಕೃತ ಒಪ್ಪಿಗೆ ಸಿಗುವುದೊಂದೇ ಬಾಕಿ. ರಾಷ್ಟ್ರೀಯ ನಾಯಕರು ಒಪ್ಪಿದರೆ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದುಕೊಳ್ಳಲಿದ್ದಾರೆ.