'ಸಾರ್ವಜನಿಕ ಸ್ಥಳದಲ್ಲಿ ಧೂಮ, ತಂಬಾಕು ಸೇವನೆ ನಿರ್ಬಂಧಕ್ಕೆ ಕಠಿಣ ಕಾನೂನು ಅಗತ್ಯ'
ಕ.ಪ್ರ. ವಾರ್ತೆ ರಾಮನಗರ ಆ.2
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಮತ್ತು ತಂಬಾಕು ಪದಾರ್ಥಗಳ ಸೇವನೆಗೆ ನಿರ್ಬಂಧ ಹೇರುವ ಕಾಯ್ದೆಗಳಿದ್ದರೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಕ್ಯಾಂಪೇನ್ ಫಾರ್ ಟೊಬಾಕೋ ಫ್ರೀ ಕಿಡ್ಸ್ನ ದಕ್ಷಿಣ ಪೂರ್ವ ಏಷ್ಯಾ ವಿಭಾಗದ ನಿರ್ದೇಶಕಿ ವಂದನಾ ಷಾ ವಿಷಾದಿಸಿದರು.
ಜಿಲ್ಲಾ ಎಸ್ಪಿ ಕಚೇರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗಳಿಗೆ ಭೇಟಿ ನೀಡಿ, ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುವುದು ಮತ್ತು ತಂಬಾಕು ಪದಾರ್ಥಗಳ ಸೇವನೆ ವಿರುದ್ಧ ಕಠಿಣ ಕಾನೂನು ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿರ್ಬಂಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಹಾಗೂ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಎಸ್ಪಿ ಅನುಪಮ್ ಅಗ್ರವಾಲ್ಗೆ ಮನವಿ ಸಲ್ಲಿಸಲಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಹ್ಲಾದ್ಗೌಡ ಜತೆಯೂ ಚರ್ಚಿಸಿದ ತಂಡ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ವಿನಂತಿಸಲಾಗಿದೆ ಎಂದರು.
ಶಾಲೆ, ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶ, ರಸ್ತೆ, ಸರ್ಕಾರಿ ಕಟ್ಟಡಗಳು, ಹೊಟೇಲ್, ರೆಸ್ಟೋರೆಂಟ್, ಸಿನೆಮಾ ಮಂದಿರಗಳು, ರೇಲ್ವೆ, ಬಸ್, ವಿಮಾನ ನಿಲ್ದಾಣಗಳು, ಶಾಪಿಂಗ್ ಮಾಲ್ಗಳು, ಮನರಂಜನಾ ಕೇಂದ್ರಗಳು ಹೀಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿರುವ ಪ್ರದೇಶಗಳಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದರು.
'ಎಲ್ಲರಿಗೂ ಒಳಿತು ಬಯಸುವುದೇ ಮಾನವ ಧರ್ಮ'
ಕ.ಪ್ರ. ವಾರ್ತೆ ಆನೇಕಲ್ಲು ಆ.2
ಇಸ್ಲಾಂ, ಕ್ರೈಸ್ತ ಹಾಗೂ ಹಿಂದೂ ಧರ್ಮ ಸೇರಿದಂತೆ ಎಲ್ಲ ಧರ್ಮ ಪ್ರವಾದಿಗಳೂ ಮಾನವನನ್ನು ಮಾನವನಂತೆ ಕಾಣು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡು ಹಾಗೂ ಯಾರದೇ ಮನಸ್ಸು, ದೇಹ ಹಾಗೂ ಭಾವನೆಗಳಿಗೆ ತೊಂದರೆ ಮಾಡದೆ ಗೌರವಿಸಬೇಕೆಂದು ಸಾರಿ ಹೇಳಿರುವುದಾಗಿ ಮೌಲನಾ ಉಮರ್ ಷರೀಫ್ ತಿಳಿಸಿದರು.
ಅವರು ಆನೇಕಲ್ಲಿನ ಜಾಮಿಯಾ ಮಸೀದಿಯಲ್ಲಿ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿದ್ದ ಹಿಂದೂ ಮತ್ತು ಕ್ರಿಶ್ಚಿಯನ್ ಸಹೋದರರಿಗೆ ಖುರಾನ್ ಮತ್ತು ಇಸ್ಲಾಂ ಧರ್ಮ ಪದ್ಧತಿಯ ಮಹತ್ವವನ್ನು ವಿವರಿಸಿ ಮಾತನಾಡಿದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ಮುಸ್ಲಿಂ ಸಹೋದರರು ಉಪವಾಸ ನಂತರ ಸಾತ್ವಿಕ ಆಹಾರವಾದ ಹಣ್ಣು ಹಂಪಲು ಸೇವಿಸಿ ಹಿತೈಷಿಗಳಿಗೂ ಉಪಚಾರ ಮಾಡುವ ಸೌಹಾರ್ದತೆ ಸ್ವಾಗತಾರ್ಹ ಎಂದರು.
ಫಾದರ್ ಲೋಬೋ, ಜೆರೋಮ್, ಮೌಲನಾ ಮೆಹತಾಬ್, ವಜೀರ್ ಹಜರತ್, ಸಮೀಉಲ್ಲ, ಸೇರಿದಂತೆ ಮುಖಂಡರು ಕೂಟದಲ್ಲಿ ಭಾಗವಹಿಸಿ ಉತ್ತಮ ಭಾವನೆಗಳನ್ನು ವಿನಿಮಯ ಮಾಡಿಕೊಂಡರು.