ಸೇವಾ ಮನೋಭಾವದಿಂದ ಕ್ಷೀರಭಾಗ್ಯ ಯಶಸ್ಸು
ಕ.ಪ್ರ. ವಾರ್ತೆ ಮಾಗಡಿ ಆ.2
ಕೆನೆಭರಿತ ಹಾಲು ಸಂಪೂರ್ಣ ಪೌಷ್ಟಿಕಾಂಶವುಳ್ಳ ಆಹಾರ, ತಾತ್ಸಾರ ಮನೋಭಾವ ಬೇಡ, ಕ್ಷೀರಭಾಗ್ಯ ಯೋಜನೆಯ ಯಶಸ್ವಿಗೆ ಎಲ್ಲರು ಸೇವಾ ಮನೋಭಾವನೆಯಿಂದ ಶ್ರಮಿಸಬೇಕು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಕ್ಕೋಜಿ ನುಡಿದರು.
ಅವರು ಪಟ್ಟಣದ ಜಿಜಿಎಂಎಸ್ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಾ ಹಾಲು ಅಮೃತಕ್ಕೆ ಸಮಾನ, ಮಕ್ಕಳು ದೇವರ ಸಮಾನ, ಮಕ್ಕಳು ಅಮೃತದಂತಹ ಹಾಲು ದೇವರಂತ ಸೇವಿಸುವುದರಿಂದ ಅಪೌಷ್ಟಿಕ ಕೊರತೆ ದೂರವಾಗುತ್ತದೆ. ದೇಹಾರೋಗ್ಯ ಉತ್ತಮವಾಗಿರುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರಲ್ಲದೆ ಶಾಲೆಯಲ್ಲಿನ ಅಡುಗೆ ಸಿಬ್ಬಂದಿ ಅಡುಗೆ ಕೊಣೆಯ ಸ್ವಚ್ಛತೆ ಕಾಪಾಡಬೇಕು. ಸ್ವಚ್ಛವಾದ ಪಾತ್ರೆಯಲ್ಲಿಯೇ ಹಾಲು ಕಾಯಿಸಿ, ಹಾರಿಸಿ ಮಕ್ಕಳಿಗೆ ನೀಡಬೇಕು. ಈ ನಿಟ್ಟಿನಲ್ಲಿ ಯೋಜನೆಯನ್ನು ಸಮರ್ಪಕವಾಗಿ ಬಳಕೆಯಾಗಬೇಕು.ಆಗ ಮಾತ್ರ ಯೋಜನೆ ಶೇ.100 ರಷ್ಟು ಯಶಸ್ವಿಯಾಗುತ್ತದೆ. ಕ್ಷೀರಾಭಾಗ್ಯ ಯೋಜನೆ ಯಶಸ್ವಿಗೆ ಎಲ್ಲರು ಸೇವಾ ಮನೋಭಾವನೆಯಿಂದ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಆರ್. ರಂಗಸ್ವಾಮಿ ಮಾತನಾಡಿ ದೇಶದಲ್ಲಿ ಭವಿಷ್ಯದ ಮಕ್ಕಳು ಆರೋಗ್ಯವಂತರಾಗಿರಬೇಕು. ದೇಶವನ್ನು ಸುಭದ್ರವಾಗಿ ಕಟ್ಟಬೇಕು ಎಂಬ ಮಹತ್ವಕಾಂಕ್ಷೆಯಿಂದ ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಶಾಲೆಗೆ ಬಂದ ತಕ್ಷಣ ಮಕ್ಕಳಿಗೆ ಕೆನೆ ಬರಿತ ಹಾಲು ನೀಡಿ ಅಧ್ಯಾಯನದಲ್ಲಿ ತೊಡಗಿಸಿದರೆ ಒಳ್ಳೆಯ ಮನಸ್ಸುವುಳ್ಳವರಾಗುವುದಲ್ಲದೆ ಜ್ಞಾನಾರ್ಜನೆ ಹೆಚ್ಚುತ್ತದೆ ಎಂದರು. ಸರ್ಕಾರ ಈಗಾಗಲೇ ಶಾಲಾ ಮಕ್ಕಳಿಗೆ ಮೂರು ಜೊತೆ ಸಮವಸ್ತ್ರ ನೀಡಿದೆ. ಬೆಳಿಗ್ಗೆ ಕ್ಷೀರಾಭಾಗ್ಯ,ಅಕ್ಷರಭಾಗ್ಯ, ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಮಕ್ಕಳು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದರು.
ಕ್ಷೀರಭಾಗ್ಯ ಮತ್ತು ಅನ್ನಭಾಗ್ಯ ಯೋಜನೆಯ ಯಶಸ್ವಿಗೆ ಶಿಕ್ಷಕರು,ಪೋಷಕರ ಪಾತ್ರ ಬಹಳ ಮುಖ್ಯವಾದುದು ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು.
ಸೋಲೂರು ಹಾಲು ಶಿಥಲೀಕೇಂದ್ರದ ಉಪ ವ್ಯವಸ್ಥಾಪಕ ಡಾ. ಮೋಹನ್ ರುಮಾರ್ ಮಾತನಾಡಿ ಮಕ್ಕಳಲ್ಲಿನ ಅಪೌಷ್ಟಿಕ ಕೊರತೆ ನಿವಾರಣೆಗೆ ಹಾಲು ಸಮತೋಲನ ಪೌಷ್ಟಿಕ ಆಹಾರವಾಗಿದೆ. ಶಾಲೆಯಲ್ಲಿನ ಅಡುಗೆ ಸಿಬ್ಬಂದಿಗಳು ಕಡ್ಡಾಯವಾಗಿ ಸ್ಟೀಲ್ ಪಾತ್ರೆಯಲ್ಲಿಯೇ ಹಾಲು ಕಾಯಿಸಿ ಮಕ್ಕಳಿಗೆ ವಿತರಣೆ ಮಾಡಬೇಕು. ಹಾಲು ಕಾಯಿಸುವುದಾಗ ಬಹಳ ಎಚ್ಚರಿಕೆಯಿರಬೇಕು. ಹಾಲು ಖರ್ಚಾಗುವುದರಿಂದ ಹಾಲು ಉತ್ಪಾದನೆ ಮಾಡುವ ರೈತರಿಗೂ ಅನುಕೂಲವಾಗುತ್ತದೆ ಎಂದರು.
ಸಹಾಯಕ ವ್ಯವಸ್ಥಾಪಕ ಜವರಯ್ಯ, ವರದರಾಜು, ಶಿಕ್ಷಕರಾದ ನರಸಿಂಹಮೂರ್ತಿ, ರಾಜು, ರಂಗನಾಥ್. ನಾಗಯ್ಯ ಇತರರು ಇದ್ದರು.
ಕನಕಪುರದಲ್ಲಿ ಚಾಲನೆ...
ಕನಕಪುರ: ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಕ್ಷೀರಭಾಗ್ಯ ಯೋಜನೆಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜೆ.ನಾಯಕ್ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ಉದ್ಘಾಟಿಸಿದರು. ರಾಜ್ಯ ಹಾಲು ಮಹಾಮಂಡಳದ ಅಧಿಕಾರಿಗಳಾದ ಡಾ.ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ವ್ಯಾಪ್ತಿಯಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 20,744 ಪ್ರಾಥಮಿಕ ಹಾಗೂ 4,389 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಂದಿನಿ ಕೆನೆಭರಿತ ಹಾಲನ್ನು ಪ್ರತೀ ವಿದ್ಯಾರ್ಥಿಗೆ ವಾರದಲ್ಲಿ ಮೂರುದಿನ 150 ಮಿಲೀ ವಿತರಿಸಲಾಗುವುದು. ಪ್ರತೀ ತಿಂಗಳ 10 ನೇ ತೇದಿಯೊಳಗಾಗಿ ಶಾಲೆಗಳಿಗೆ ಹಾಲಿನ ಪುಡಿ ಅಥವಾ ಹಾಲಿನ ಸ್ಯಾಚೆಟ್‌ಗಳನ್ನು ವಿತರಿಸಲಾಗುವುದು. ಅಕ್ಷರ ದಾಸೋಹ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಕ್ಷೀರಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ ಮಾಸಿಕ 100 ರು. ವಿತರಿಸಲಾಗುವುದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವಕುಮಾರ್ ವಿವರಗಳನ್ನು ನೀಡಿದರು. ತಾಪಂ ಸಿಇಓ ಜಿ.ಜೆ.ನಾಯಕ್ ಮಾತನಾಡಿದರು. ಸಮಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮಹೇಶ್, ದೈಹಿಕಶಿಕ್ಷಣಾಧಿಕಾರಿ ಮೋಹನರಾಜೇಅರಸ್, ಚಂದ್ರಾವತಿ, ಮುಖ್ಯಶಿಕ್ಷಕ ನಾಗರಾಜಯ್ಯ ಪಾಲ್ಗೊಂಡಿದ್ದರು.