12 ಕೊಳವೆ ಬಾವಿ ಕೊರೆವ ಕಾರ್ಯಕ್ಕೆ ಶಾಸಕರಿಂದ ಚಾಲನೆ
ದೇವನಹಳ್ಳಿ: ದೇವನಹಳ್ಳಿ ಪುರಸಭಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಸುಮಾರು 66 ಲಕ್ಷ ರು. ವೆಚ್ಚದಲ್ಲಿ 12 ಕೊಳವೆ ಬಾವಿ ಕೊರೆಯುವ ಕಾರ್ಯಕ್ಕೆ ಶಾಸಕ ಪಿಳ್ಳಮುನಿಶಾಮಪ್ಪ ಅವರು ಇಲ್ಲಿನ ಶ್ರೀ ವೇಣುಗೋಪಾಲ ಸ್ವಾಮಿ ಕೆರೆಯ ಪಂಪ್ಹೌಸ್ ಬಳಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಸರ್ಕಾರದ ಸಂಪೂರ್ಣ ಅನುದಾನವನ್ನು ಬಳಸಿಕೊಂಡು ನಿಗದಿತ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳಲಿವೆ ಎಂದರಲ್ಲದೆ ತಾವು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಅಲ್ಲದೆ ಯಾವುದೇ ಸಮಸ್ಯೆ ಇರಲಿ ಸ್ಪಂದಿಸುತ್ತಿರುವುದಾಗಿ ತಿಳಿಸಿದರು.
2012-13 ನೇ ಸಾಲಿನ ಎಸ್ಎಫ್ಸಿ ಮುಕ್ತ ನಿಧಿ ಯೋಜನೆಯಲ್ಲಿ 33 ಲಕ್ಷ ರು. ವೆಚ್ಚದಲ್ಲಿ 6 ಕೊಳವೆ ಬಾವಿ, 2012-13 ನೇಸಾಲಿನ 13 ನೇ ಹಣಕಾಸು ಯೋಜನೆಯಲ್ಲಿ 14 ಲಕ್ಷ ರು. ವೆಚ್ಚದಲ್ಲಿ ಎರಡು ಕೊಳವೆ ಬಾವಿ ಹಾಗೂ 2013-14 ನೇ ಸಾಲಿನ ಎಸ್ಎಫ್ಸಿ ಬರ ಪರಿಹಾರ ಅನುದಾನದಲ್ಲಿ 19.2 ಲಕ್ಷ ರು. ವೆಚ್ಚದಲ್ಲಿ ನಾಲ್ಕು ಕೊಳವೆ ಬಾವಿಗಳನ್ನು ತೋಡಿಸಿ ಅಗತ್ಯವಾದ ಪಂಪ್ ಮೋಟರ್ ಅಳವಡಿಸಲಾಗುತ್ತಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.
ಪುರಸಭಾ ಸದಸ್ಯರಾದ ಸೊಸೈಟಿ ಕುಮಾರ್, ನರಸಿಂಹಮೂರ್ತಿ, ಗೋಪಾಲ್, ತಾಲೂಕು ಜೆಡಿಎಸ್ ಅಧ್ಯಕ್ಷರಾದ ಮುನಿಶಾಮಯ್ಯ ಉಪಸ್ಥಿತರಿದ್ದರು.