ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅನಿತಾ, ಡಿ.ಕೆ.ಸುರೇಶ್, ಎಂ.ಕೃಷ್ಣಪ್ಪ ನಾಮಪತ್ರ ಸಲ್ಲಿಕೆ

Srinivasa Murthy VN
Updated On : 4 Aug 2013, 12:24 pm

ಕ.ಪ್ರ.ವಾರ್ತೆ ರಾಮನಗರ ಆ. 3
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್, ಬಿಜೆಪಿಯಿಂದ ಶಾಸಕ ಎಂ.ಕೃಷ್ಣಪ್ಪ ಸಹಿತ 13 ಅಭ್ಯರ್ಥಿಗಳು ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ಸ್ಪರ್ಧಾ ಕಣಕ್ಕೆ ಇಳಿದ ಅಭ್ಯರ್ಥಿಗಳ ಸಂಖ್ಯೆ 20ಕ್ಕೇರಿದೆ.
ಮರು ಚುನಾವಣೆಗೆ ಜು.27ರಂದು ಅಧಿಸೂಚನೆ ಹೊರ ಬಿದ್ದಿತ್ತು. ಅಲ್ಲಿಂದ ಶುಕ್ರವಾರದವರೆಗೆ 7 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಶನಿವಾರ ಒಂದೇ ದಿನ ಪ್ರಮುಖ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರರು ಸೇರಿದಂತೆ ಹದಿಮೂರು ಮಂದಿ ತಮ್ಮ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ.
ಅನಿತಾ ನಾಮಪತ್ರ ಸಲ್ಲಿಕೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಡಿ.ನಾಗರಾಜಯ್ಯ, ಇ. ಕೃಷ್ಣಪ್ಪ, ಪುಟ್ಟಣ್ಣ, ಅಪ್ಸರ್ ಆಗಾ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು, ಮಾಜಿ ಶಾಸಕ ಅಬ್ದುಲ್ ಅಜೀಂ, ಮುಖಂಡ ಡಿ.ಎಂ.ವಿಶ್ವನಾಥ್ ಸೇರಿದಂತೆ ಅಪಾರ ಬೆಂಬಲಿಗರ ಜತೆಗೂಡಿ ಆಗಮಿಸಿದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಚುನಾವಣಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಬೆಂಗಳೂರಿನಿಂದ ಪಕ್ಷದ ಮುಖಂಡರೊಂದಿಗೆ ಆಗಮಿಸಿದ ಅನಿತಾ ಕುಮಾರಸ್ವಾಮಿ ನೇರವಾಗಿ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಬಳಿಕ ಮೆರವಣಿಗೆಯಲ್ಲಿ ತೆರಳಿ ನಗರ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇಗುಲ ಮತ್ತು ಶ್ರೀ ಸಾಯಿಬಾಬಾ ದೇಗುಲಕ್ಕೆ ತೆರಳಿ ವಿಶೇಷ ಪೂಜೆ, ದರ್ಗಾ ಹಾಗೂ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು.   
ಸುರೇಶ್ ಉಮೇದುವಾರಿಕೆ: ಕಾಂಗ್ರೆಸ್ ಅಭ್ಯರ್ಥಿಯಾದ ಡಿ.ಕೆ.ಸುರೇಶ್ ಅವರು ತಮ್ಮ ಸಹೋದರ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜತೆಗೂಡಿ ಮಾತಾಪಿತೃ ಆಶೀರ್ವಾದದ ಬಳಿಕ ಕನಕಪುರದಿಂದ ಬೆಂಬಲಿಗರೊಂದಿಗೆ ರಾಮನಗರಕ್ಕೆ ಆಗಮಿಸಿದರು. ಮೊದಲಿಗೆ ಶ್ರೀ ಚಾಮುಂಡೇಶ್ವರಿ ದೇಗಲದಲ್ಲಿ ವಿಶೇಷ ಪೂಜೆ, ಮಸೀದಿ ಮತ್ತು ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.  ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪಾಲ್ಗೊಂಡರು. ಆ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಜೆ.ಜಾರ್ಜ್, ಟಿ.ಬಿ.ಜಯಚಂದ್ರ, ಶಿವರಾಜ ತಂಗಡಗಿ, ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ರೋಷನ್ ಬೇಗ್ ಮಾತನಾಡಿದರು. ಶಾಸಕರು ಸಹಿತ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಭೆಯ ನಂತರ ಸಿದ್ದರಾಮಯ್ಯ ಅವರು ಮಂಡ್ಯಕ್ಕೆ ಪಯಣ ಬೆಳೆಸಿದರು. ಉಳಿದ ನಾಯಕರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸುರೇಶ್ ಚುನಾವಣಾಧಿಕಾರಿ ಶ್ರೀರಾಮರೆಡ್ಡಿ ಅವರಿಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಪರಮೇಶ್ವರ್ ಸಹಿತ ವಿವಿಧ ನಾಯಕರಿದ್ದರು.
ಶಾಸಕ ಕೃಷ್ಣಪ್ಪ ಕಣಕ್ಕೆ: ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಪಕ್ಷದ ಬಿ ಫಾರಂ ಸಮೇತ ನಾಮಪತ್ರ ಸಲ್ಲಿಸಿದರು. ಇದರಿಂದ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಡಲಿದೆ ಎನ್ನುವ ನಿರೀಕ್ಷೆ ಹುಸಿಯಾದಂತಾಗಿದೆ. ಬಿಜೆಪಿ ಕಣಕ್ಕೆ ಇಳಿಯುವ ಮೂಲಕ ತ್ರಿಕೋನ ಸ್ಪರ್ಧೆಯು ಎದುರಾಗಿದೆ.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಹಾಗೂ ಚಿತ್ರ ನಟ ಜಗ್ಗೇಶ್, ಬಿಜೆಪಿಯಿಂದ ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಬಿ.ನಾಗರಾಜು, ಮಾಜಿ ಅಧ್ಯಕ್ಷ ಶಿವಮಾದು ಸೇರಿದಂತೆ ಕೆಲವೇ ಮುಖಂಡರು ಕೃಷ್ಣಪ್ಪ ಅವರ ಉಮೇದುವಾರಿಕೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದರು. ಕೃಷ್ಣಪ್ಪ ಬಳಿಕ ಮುನಿರಾಜು ಕೂಡ ನಾಮಪತ್ರ ಸಲ್ಲಿಸಿದ್ದು, ಅವರೂ ಬಿ ಫಾರಂ ಸಲ್ಲಿಸಿದ್ದಾರೆ. ಉಭಯತ್ರರ ಬಿ ಫಾರಂನಲ್ಲಿ ಎರಡನೇ ಆಯ್ಕೆಯಾಗಿ ಪರಸ್ಪರರ ಹೆಸರು ಇದ್ದು, ಯಾರೇ ಒಬ್ಬರ ನಾಮಪತ್ರ ತಿರಸ್ಕೃತ ಅಥವಾ ನಾಮಪತ್ರ ಹಿಂತೆಗೆತವಾದಲ್ಲಿ ಮತ್ತೊಬ್ಬರಿಗೆ ಪಕ್ಷದ ಚಿಹ್ನೆ ಸಿಗಲು ಅಡ್ಡಿಯಿಲ್ಲ ಎನ್ನಲಾಗಿದೆ.
ನಾಮಪತ್ರ ಸಲ್ಲಿಸಿದ ಇತರರು: ಕಳೆದ ಬಾರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿದ್ದ ವಕೀಲ ಜೆ.ಟಿ.ಪ್ರಕಾಶ್ ಇಲ್ಲಿ ಜೆಡಿಯು ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಪಕ್ಷದ ಹೆಸರಿನಲ್ಲಿ ಎ.ಎಂ.ಹನುಮಂತೇಗೌಡ, ಆರ್.ಮಂಜುನಾಥ್ ಕೂಡ ನಾಮಪತ್ರ ಸಲ್ಲಿಸಿರುವರು. ಪಕ್ಷೇತರರಾದ ಎಸ್.ಸಿದ್ದರಾಮಯ್ಯ (ಹೆಗ್ಗಡೆ), ಕಾಳಯ್ಯ, ಜೆ. ನಟರಾಜು, ಸಿ. ಜಯರಾಮ್, ಬುಡಯ್ಯ ಪುಜೇರಿ, ಬಿ.ವೆಂಕಟೇಶಪ್ಪ ಕೂಡ ಉಮೇದುವಾರಿಕೆ ಅರ್ಜಿ ಸಲ್ಲಿಸಿರುವರು.
ತೇಜಸ್ವಿನಿಗೌಡ ಗೈರು: ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಈ ಕ್ಷೇತ್ರದ ಮಾಜಿ ಸಂಸದೆ ತೇಜಸ್ವಿನಿಗೌಡ ಅವರು ಗೈರಾಗಿದ್ದರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತ್ತು ತೇಜಸ್ವಿನಿಗೌಡ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ತೇಜಸ್ವಿನಿಗೌಡ ಅವರ ಗೈರು ಗಮನಾರ್ಹವಾಗಿತ್ತು.
ಹೊರಗುಳಿದ ಎಚ್‌ಡಿಕೆ: ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿ ಸಹಿತ 5 ಮಂದಿಗಷ್ಟೇ ಅವಕಾಶ. ಅನಿತಾ ಕುಮಾರಸ್ವಾಮಿ ಜತೆಗೆ ದೇವೇಗೌಡ, ಎ.ಕೃಷ್ಣಪ್ಪ, ಅಬ್ದುಲ್ ಅಜೀಂ ಸೇರಿ ಐದು ಮಂದಿ ಇದ್ದುದರಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ಕೊಠಡಿಯಿಂದ ಹೊರಗುಳಿದರು.
ಅಶೋಕ್, ಎಚ್‌ಡಿಕೆ ಮಾತುಕತೆ:
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿರುವಾಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಡಿಸಿಎಂ ಆರ್.ಅಶೋಕ್ ನಡುವೆ ನಡೆಯುತ್ತಿದ್ದ ಗಹನ ಚರ್ಚೆಯು ನೆರೆದಿದ್ದವರಿಗೆ ಅಚ್ಚರಿ ಮೂಡಿಸಿತ್ತು. ಇದು, ಉಭಯ ಪಕ್ಷಗಳ ನಡುವೆ ಮೈತ್ರಿ ಇಲ್ಲವೇ ಒಳ ಒಪ್ಪಂದದ ಕೊಂಡಿ ಉಳಿದಿದೆ ಎನ್ನುವ ಸುಳಿವಾಗಿದೆ.

ಟ್ರಾಫಿಕ್ ಜಾಮ್ ಸಮಸ್ಯೆ
ಮರು ಚುನಾವಣೆಗೆ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಜನ ಜಂಗುಳಿಯ ಕಾರಣಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.  ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೂ ಎರಡೂ ಕಡೆಯ ವಾಹನ ಸಂಚಾರಕ್ಕೆ ಸಂಚಕಾರ ಒದಗಿತ್ತು. ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚು ವಾಹನಗಳ ಸಂಚಾರವಿತ್ತು. ರಾಜಕೀಯ ಕಾರ್ಯಕರ್ತರು ರಸ್ತೆ ಅತಿಕ್ರಮಿಸಿದ್ದರಿಂದ ಇಕ್ಕೆಲಗಳಲ್ಲಿ ಸುಮಾರು ಏಳೆಂಟು ಕಿ.ಮೀ. ದೂರ ವಾಹನಗಳು ಸಾಲುಗಟ್ಟಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement