ಉಪ ಚುನಾವಣೆಯಲ್ಲಿ ಆತುರದ ನಿರ್ಧಾರ ಬೇಡ
ಕ.ಪ್ರ.ವಾರ್ತೆ ಚನ್ನಪಟ್ಟಣ ಆ. 3
ಲೋಕಸಭಾ ಉಪ ಚುನಾವಣೆಯಲ್ಲಿ ಆತುರದ ನಿರ್ಧಾರ ತಳೆಯುವುದು ಬೇಡ ಆ.15ರ ಬಳಿಕ ಎಲ್ಲಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನ ತಳೆಯೋಣ ಇದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಯೋಗೇಶ್ವರ್ ಕಾರ್ಯಕರ್ತರಿಗೆ ನೀಡಿದ ಕರೆ.
ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೆರಡು ನಮಗೆ ಸಮಾನ ಶತ್ರುಗಳಾಗಿದ್ದು ನಾವು ಎಚ್ಚರಿಕೆಯ ಹೆಜ್ಜೆ ಇರಿಸಬೇಕಿದೆ ಎಂದರು.
ಈ ಬಾರಿಯ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ. ನಮ್ಮ ಪಕ್ಷದ ಶಕ್ತಿಯನ್ನರಿತಿರುವ ಎರಡೂ ಪಕ್ಷಗಳು ಬೆಂಬಲ ಕೋರುತ್ತಿವೆ. ಹಾಗೆಂದ ಮಾತ್ರಕ್ಕೆ ನಾವು ಅವರ ಅವಕಾಶವಾದಿ ರಾಜಕಾರಣಕ್ಕೆ ಮನ್ನಣೆ ನೀಡುವುದು ಬೇಡ ಎಂದು ಎಚ್ಚರಿಸಿದರು.
ಎಲ್ಲರೂ ಕೇಳಿದ್ದಾರೆ: ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಿಬ್ಬರೂ ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ, ನಾನು ಯಾರಿಗೂ ಬೆಂಬಲ ನೀಡುವುದಾಗಿ ಮಾತು ಕೊಟ್ಟಿಲ್ಲ ಎಂದರು.
ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ನಮ್ಮ ರಾಷ್ಟ್ರನಾಯಕರಿಗೆ ಮನದಟ್ಟು ಮಾಡಿ ಕೊಡುತ್ತೇನೆ. ಅವರ ಜತೆ ಚರ್ಚಿಸಿ ಅವರ ನಿರ್ಧಾರವನ್ನು ಪಕ್ಷದ ಕಾರ್ಯಕರ್ತರ ಸಭೆಗೆ ತಿಳಿಸಿ ಕಾರ್ಯಕರ್ತರು ಮುಖಂಡರ ತೀರ್ಮಾನದ ಮೇಲೆಗೆ ಮುಂದಿನ ಹೆಜ್ಜೆ ಇರಿಸುವುದಾಗಿ ಅವರು ಸ್ಪಷ್ಟಪಡಿಸಿದರು.
ದುಡುಕ ಬೇಡಿ: ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಸೆಳೆಯಲು ಕೆಲ ಅನ್ಯಪಕ್ಷಗಳ ಮುಖಂಡರು ನಿಮ್ಮ ಮನೆಬಾಗಿಲಿಗೆ ಬರುತ್ತಾರೆ ಹಾಗೆಂದ ಮಾತ್ರಕ್ಕೆ ನೀವು ಅವರ ಮಾತಿಗೆ ಮರುಳಾಗ ಬೇಡಿ. ನಾವೆಲ್ಲ ಒಗ್ಗಟ್ಟಿನಿಂದ ನಿರ್ಣಯ ಕೈಗೊಳ್ಳೋಣ ಎಂದರು.
ಹಿಂದಿನದನ್ನು ಮರೆಯುವುದಿಲ್ಲ: ಕಾಂಗ್ರೆಸ್ ಬೆಂಬಲಿಸೋಣ ಎಂದು ಕಾರ್ಯಕರ್ತರೊಬ್ಬರು ನೀಡಿದ ಸಲಹೆಗೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್ ಹಿಂದೆ ನಾನು ಕಾಂಗ್ರೆಸ್ ಪಕ್ಷಕ್ಕೆ ಬರಲು ಡಿ.ಕೆ.ಶಿವಕುಮಾರ್ ಅಡ್ಡಗಾಲು ಹಾಕಿದರು, ಇದೀಗ ಅಗತ್ಯವಿದೆ ಎಂದು ಮನೆಬಾಗಿಲಿಗೆ ಬಂದಿದ್ದಾರೆ. ಮುಂದೆಯೂ ಹೀಗೆ ಮಾಡುವುದಿಲ್ಲ ಎಂಬುದಕ್ಕೆ ಏನು ಖಾತ್ರಿ ಎಂದು ಪ್ರಶ್ನಿಸಿದರು.
ವರಿಷ್ಠರ ಸೂಚನೆ ದೊರೆತ ಬಳಿಕ ಕಾರ್ಯಕರ್ತರ ಸಭೆ ಕರೆದು ಮುಂದಿನ ನಿರ್ಧಾರ ಪ್ರಕಟಿಸೋಣ. ಅಲ್ಲಿವರೆಗೆ ನೀವು ಯಾವುದೇ ನಿರ್ಧಾರ ತಳೆಯುವುದು ಬೇಡ ಎಂದವರು ಸಲಹೆ ನೀಡಿದರು.