ಬಿಜೆಪಿ, ಕೆಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ, ಕಳಚಿದ ಮುಖವಾಡ
ಕ.ಪ್ರ.ವಾರ್ತೆ ರಾಮನಗರ ಆ. 3
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಮರು ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ, ಕೆಜೆಪಿ ನಡುವೆ ಒಳ ಒಪ್ಪಂದವೇರ್ಪಟ್ಟಿದೆ. ಹೀಗಾಗಿ ಜೆಡಿಎಸ್ ಮುಖವಾಡ ಕಳಚಿ ಬಿದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ನಗರದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ತನ್ನ ಜಾತ್ಯತೀತ ನಿಲುವನ್ನು ಎಂದೋ ಮರೆತಿದೆ. ಹೀಗಾಗಿ ಆ ಪಕ್ಷ ಹೆಸರಿನ ಜತೆಗಿರುವ ಜಾತ್ಯತೀತ ಎನ್ನುವ ಪದ ಕೈಬಿಡಲಿ ಎಂದರು.
ಜೆಡಿಎಸ್, ಬಿಜೆಪಿ ಮತ್ತು ಕೆಜೆಪಿ ನಾಯಕರು ರಾತ್ರೋ ರಾತ್ರಿ ಭೇಟಿಯಾಗಿ ಮಾತುಕತೆ ನಡೆಸುತ್ತಾರೆ. ಬೆಳಗಾಗುತ್ತಲೇ ಪರಸ್ಪರ ಟೀಕಾರೋಪ ಮಾಡಿಕೊಂಡು ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಪ್ರತಿಪಕ್ಷಗಳ ಗೋಸುಂಬೆತನ ಪ್ರಸಕ್ತ ಮರು ಚುನಾವಣೆಯಲ್ಲಿ ಬಯಲಾಗಿದೆ ಎಂದು ಅವರು ಆರೋಪಿಸಿದರು.
ಗೌಡರ ಕೊಡುಗೆ ಏನಿಲ್ಲ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನರು ಎಚ್.ಡಿ.ದೇವೇಗೌಡರನ್ನು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹುದ್ದೆಗೇರಿಸಿದ್ದಾರೆ. ಈ ಜನರಿಂದಲೇ ಎಚ್.ಡಿ.ಕುಮಾರಸ್ವಾಮಿಯೂ ಮುಖ್ಯಮಂತ್ರಿ ಆದರು. ಈ ಭಾಗದ ಜನರ ಕೊಡುಗೆ ಆ ಕುಟುಂಬಕ್ಕೆ ಸಾಕಷ್ಟಿದೆ. ಆದರೆ, ಕುಟುಂಬದವರ ಕೊಡುಗೆ ಇಲ್ಲಿಗೆ ಏನೇನೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
5 ವರ್ಷಕ್ಕಾಗಿ ಲೋಕಸಭೆಗೆ ಆರಿಸಿ ಹೋದ ಕುಮಾರಸ್ವಾಮಿ ಯಾವ ಪುರುಷಾರ್ಥಕ್ಕಾಗಿ ರಾಜಿನಾಮೆ ನೀಡಿದ್ದಾರೋ ತಿಳಿಯದು. ಲೋಕಸಭೆಯಲ್ಲಿ ಅವರು ಒಮ್ಮೆಯೂ ಈ ಕ್ಷೇತ್ರ ಮತ್ತು ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲೇ ಇಲ್ಲ. ಹಾಜರಿಗಿಂತ ಗೈರಾಗಿದ್ದೇ ಹೆಚ್ಚು ಎಂದು ಅವರು ಆರೋಪಿಸಿದರು.
ಪ್ರತಿಷ್ಠೆಯ ಚುನಾವಣೆ: ಜೆಡಿಎಸ್, ಬಿಜೆಪಿ, ಕೆಜೆಪಿಯು ಒಗ್ಗಟ್ಟಾಗಿ ಕಾಂಗ್ರೆಸ್ ಸೋಲಿಸಲು ಷಡ್ಯಂತ್ರ ರೂಪಿಸಿವೆ. ಈ ಕಾರಣದಿಂದ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಗಳ ಚುನಾವಣೆ ಪ್ರತಿಷ್ಠೆ ಕಣವಾಗಿದೆ. ಉಭಯ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ಗೆಲವಿಗೆ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಬಲಿಷ್ಠ ರಾಷ್ಟ್ರದ ಗುರಿ: ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಭಾರತದ ಆರ್ಥಿಕ ವ್ಯವಸ್ಥೆ ಹದಗೆಡದಂತೆ ಕಾಪಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಈ ಚುನಾವಣೆಯಲ್ಲೂ ಪಕ್ಷವನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.
ಬೇರೆ ಪಕ್ಷಗಳು ಅಧಿಕಾರ ಅನುಭವಿಸುವುದಕ್ಕಾಗಿ ಚುನಾವಣೆ ಎದುರಿಸುತ್ತವೆ. ಆದರೆ, ಕಾಂಗ್ರೆಸ್ ಹಾಗಲ್ಲ. ಜನಪರ ಆಡಳಿತವೇ ಕಾಂಗ್ರೆಸ್ ಧ್ಯೇಯವಾಗಿದೆ. ನನ್ನನ್ನು ಹೈಕಮಾಂಡ್ ಕಣಕ್ಕೆ ಇಳಿಸಿದೆ. ಆದರೆ, ವಾಸ್ತವದಲ್ಲಿ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ, ಶ್ರೀಸಾಮಾನ್ಯರ ಅಭ್ಯರ್ಥಿ. ತಾವೆಲ್ಲರೂ ನನ್ನನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಲು ಶ್ರಮಿಸಿ ಎಂದು ಅಭ್ಯರ್ಥಿ ಡಿ.ಕೆ.ಸುರೇಶ್ ಮನವಿ ಮಾಡಿದರು. ಸಭೆಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಮುನಿರತ್ನ ಮಾತನಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಸಚಿವರಾದ ಕೆ.ಜೆ.ಜಾರ್ಜ್, ಟಿ.ಬಿ.ಜಯಚಂದ್ರ, ಶಿವರಾಜ ತಂಗಡಗಿ, ಶಾಸಕರಾದ ಡಿ.ಕೆ.ಶಿವಕುಮಾರ್, ಶಿವಣ್ಣ, ಎಸ್.ಟಿ.ಸೋಮಶೇಖರ್, ಆರ್.ರೋಷನ್ ಬೇಗ್, ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು, ಮುನಿಯಪ್ಪ, ಸಿ.ಎಂ.ಲಿಂಗಪ್ಪ, ಎಚ್.ಎಂ.ರೇವಣ್ಣ, ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಯುವ ಘಟಕ ಅಧ್ಯಕ್ಷ ರಿಜ್ವಾನ್ ಅಹಮದ್, ಮುಖಂಡರಾದ ಮರಿದೇವರು, ಎ.ಮಂಜುನಾಥ್, ಕೆ.ರಮೇಶ್, ರಘುನಂದನ್ ರಾಮಣ್ಣ ಮತ್ತಿತರರಿದ್ದರು.