ಮಾಗಡಿ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಕಾಟ
ಮಾಗಡಿ: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರು ವಾಹನ ಪ್ರಯಾಣಿಕರು ರಸ್ತೆಯಲ್ಲಿ ಓಡಾಡುವುದು ತುಂಬ ದುಸ್ತುರವಾಗಿದೆ.
ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ, ಪ್ರತಿ ಬೀದಿಗಳಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು, ಹಗಲು ಮತ್ತು ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಗೆ ರಸ್ತೆ ಸಂಚಾರ ಕಷ್ಟಕರವಾಗಿದೆ. ಇತ್ತೀಚಗೆ ಕುದೂರಿನ ಹುಲೀಕಲ್ ಬಳಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬೀದಿ ನಾಯಿ ಅಡ್ಡ ಬಂದ ಕಾರಣ ಆಯ ತಪ್ಪಿ ನಾಯಿ ಮೇಲೆ ಬೈಕ್ ಹರಿದು ರಸ್ತೆಯಲ್ಲಿ ಬಿದ್ದ ವ್ಯಕ್ತಿ ಸತ್ತ. ಆದರೆ ನಾಯಿ ಮಾತ್ರ ಬಚಾವ್. ಇಂತಹ ಹತ್ತಾರು ಘಟನೆಗಳು ತಾಲೂಕಿನಲ್ಲಿ ನಡೆದಿವೆ.
ನಾಯಿ ಕಾಟದಿಂದ ಸಾರ್ವಜನಿಕರು ರಾತ್ರಿ, ಹಗಲಿನಲ್ಲೂ ಓಡಾಟ ದುಸ್ತುರವಾಗಿದೆ. ಬೀದಿ ನಾಯಿಗಳ ಕಾಟದಿಂದ ಶಾಲಾ ಮಕ್ಕಳ ಮೇಲೆರಗಿದ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿಗಳು ಕೂಡಲೆ ನಾಯಿ ಕಾಟ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನಾಗರಿಕರು ನಿರ್ಭಯದಿಂದ ಸಂಚರಿಸಲು ಕ್ರಮ ವಹಿಸಬೇಕಿದೆ ಎಂದು ಪುರನಾಗರಿಕರ ಆಶಯವಾಗಿದೆ.
ಬೆಂಕಿ ಅವಘಡಕ್ಕೆ ಕಂಪ್ಯೂಟರ್‌ಗಳು ಭಸ್ಮ
ದೊಡ್ಡಬಳ್ಳಾಪುರ: ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣ ಬಳಿಯ ಎಸ್‌ಪಿಎ ಕಾಂಪ್ಲೆಕ್ಸ್‌ನಲ್ಲಿರುವ ವೀರಭದ್ರ ಪ್ರಿಂಟರ್ಸ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿ ಕಂಪ್ಯೂಟರ್‌ಗಳು, ಮುದ್ರಿತ ಕಾಗದಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಶುಕ್ರವಾರ ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ನಂತರ ಬೆಂಕಿ ಹೊತ್ತಿಕೊಂಡಿದೆ. ಹೊಗೆ ಬರುತ್ತಿದ್ದನ್ನು ಕಂಡ ಸ್ಥಳೀಯರು ಕೂಡಲೇ ಪ್ರಿಂಟರ್ಸ್‌ನ ಮಾಲೀಕ ಆರ್.ಮಹೇಶ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಅವರು ಘಟನಾ ಸ್ಥಳಕ್ಕೆ ಬರುವ ವೇಳೆಗೆ ಬೆಂಕಿ ಸಾಕಷ್ಟು ವ್ಯಾಪಿಸಿತ್ತು. ನಂತರ ಅಗ್ನಿಶಾಮಕಕ್ಕೆ ಮಾಹಿತಿ ತಿಳಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸರು ಶನಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈಗ ಸಿಂಹಗಳ ಸಾವಿನ ಸರದಿ
ಆನೇಕಲ್ಲು: ಹುಲಿಗಳ ಸರಣಿ ಸಾವಿನಿಂದ ಕಂಗೆಟ್ಟಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈಗ ಸಿಂಹಗಳ ಸಾವು ಪ್ರಾರಂಭವಾಗಿದೆ. ಅಮರ್(20) ಎಂಬ ಸಿಂಹ ಶುಕ್ರವಾರ ತಡರಾತ್ರಿ ಮೃತ ಪಟ್ಟಿದೆ. ಅಮರ್‌ನನ್ನು ಹರಿಯಾಣದ ಫರೀದಾಬಾದ್ ಸರ್ಕಸ್ ಕಂಪನಿಯಿಂದ 2001 ರಕ್ಷಿಸಿ ತರಲಾಗಿತ್ತು. ಸಾಮಾನ್ಯವಾಗಿ ಸಿಂಹಗಳು 15 ರಿಂದ 16 ವರ್ಷಗಳ ಆಯಸ್ಸು ಹೊಂದಿದ್ದು ಇಲ್ಲಿನ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ವಿಶೇಷ ಕಾಳಜಿಯಿಂದಾಗಿ ಅದರ ಆಯಸ್ಸು ಪ್ರಮಾಣ ಹೆಚ್ಚಾಗಿತ್ತು ಎಂದು ಆಡಳಿತಾಧಿಕಾರಿ ದೇವರಾಜ್ ತಿಳಿಸಿದ್ದಾರೆ.