ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿಕ್ಷಕರು ಸಮರ್ಪಕ ಕನ್ನಡ ಬಳಸಲಿ

Srinivasa Murthy VN
Updated On : 4 Aug 2013, 12:23 pm

ನೆಲಮಂಗಲ: ಶಿಕ್ಷಕರು ಕನ್ನಡ ಭಾಷೆಯನ್ನು  ಸಮರ್ಪಕವಾಗಿ ಬಳಸಿದಾಗ ಶಿಕ್ಷಣದ ಮಹತ್ವ ಹೆಚ್ಚುತ್ತದೆ ಎಂದು  ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು.
ಅವರು  ಶನಿವಾರ ತಾಲ್ಲೂಕಿನ ಹೊನ್ನಮ್ಮಗವಿಮಠದಲ್ಲಿ  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ 2ನೇ ಸರ್ವ ಸದಸ್ಯರ ಸಭೆ ಹಾಗೂ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಣದ ವ್ಯವಸ್ಥೆಯನ್ನು ಅಧಿಕಾರದಲ್ಲಿರುವ ರಾಜಕಾರಣಿಗಳು ಬದಲಾಯಿಸಬಾರದು. ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಅವರು ನೀಡುವ ವಿಷಯವನ್ನು ಅರಿತು ಶಿಕ್ಷಣದ ಯೋಜನೆ ಹಾಗೂ ಅಭಿವೃದ್ಧಿ  ಕಾರ್ಯವನ್ನು ಸರ್ಕಾರ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಜ್ಞಾನದ ಬೆಳವಣಿಗೆಯಿಂದ ಪ್ರತಿ ಕ್ಷಣವು ಒಂದಲ್ಲ ಒಂದು ಆವಿಷ್ಕಾರವಾಗುತ್ತಲೆ ಇರುತ್ತದೆ. ಆದರೆ ಅಜ್ಞಾನ, ಮೂಡನಂಬಿಕೆಗೆ ವಿಜ್ಞಾನ ಎಷ್ಟೇ ಬೆಳೆದರು ಸಮಾಜದಲ್ಲಿನ ಭ್ರಷ್ಟಾಚಾರ, ಅಸಮಾನತೆ, ಮೂಡನಂಬಿಕೆಯನ್ನು ತೊಲಗಿಸಲು ಸಾಧ್ಯವಾಗಲೇ ಇಲ್ಲ. ಇದನ್ನು ನಿವಾರಿಸಲು ಇಂಥಹ ಸಂಸ್ಥೆಗಳು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಕಾರ್ಯಕ್ಕೆ ಸಮಾಜದ ಬುದ್ಧಿ ಜೀವಿಗಳು, ವಿದ್ಯಾವಂತರು ಕೈ ಜೋಡಿಸಬೇಕು ಎಂದರು.
ಅನಾಚಾರ: ಹೊನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡುತ್ತಾ ಬಂಡವಾಳ ಶಾಹಿಗಳಿಂದ ಇಂದು ಶಿಕ್ಷಣವನ್ನು ನಾವು ಹಣಕ್ಕೆ ಕೊಳ್ಳಬೇಕಿದೆ. ಹಿಂದೆ ನಮಗೆ ಮಾರ್ಗದರ್ಶನ ನೀಡಲು ಗುರುಗಳಿದ್ದರು. ನಮಗೆ ಗುರಿ ಇತ್ತು. ಆದರೆ ಇಂದಿನ ಸ್ಥಿತಿಗೆ ಕಾರಣ ಶಿಕ್ಷಕರು ತಮ್ಮ ಕರ್ತವ್ಯ ಮರೆತು ಭಾರಿ ಸಂಭಾವನೆಗಾಗಿ ಕೆಲಸ ಮಾಡುತ್ತಿರುವುದರಿಂದ ಸಮಾಜದಲ್ಲಿ ಸಾಕಷ್ಟು ಗೊಂದಲ ಮತ್ತು ಅನಾಚಾರ ನಡೆಯುತ್ತಿದೆ ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೌರವಾಧ್ಯಕ್ಷ ಬರಗೇನಹಳ್ಳಿ ಪರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್,  ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಹುಲಿಕಲ್ ನಟರಾಜು, ತಾಲೂಕು ಕ.ಸಾ.ಪ ಅಧ್ಯಕ್ಷ ರಾಜಶೇಖರ್, ಅಗಳಕುಪ್ಪೆ ಗ್ರಾ.ಪಂ.ಅಧ್ಯಕ್ಷ ಪ್ರಕಾಶ್, ಶಿವಗಂಗೆ ಉಪಾಧ್ಯಕ್ಷ ಹೊನ್ನಗಂಗಶೆಟ್ಟಿ, ಸಾರಿಗೆ ಇಲಾಖೆಯ ನಾಗೇಶ್, ರಾಜ್ಯ ಸಮಿತಿ ಸದಸ್ಯ ಹೊನ್ನಶಾಮಯ್ಯ, ಸಂಚಾಲಕ ರವಿಕುಮಾರ್, ಹೊನ್ನೇನಹಳ್ಳಿ ಆರಾಧ್ಯ , ಹೊಯ್ಸಳ ಸೇನೆ ರಾಜ್ಯಾಧ್ಯಕ್ಷ ಬಿ.ಎಸ್.ಕೃಷ್ಣಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement