ಅಕ್ರಮ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ: ಅಬ್ದುಲ್ ಅಹದ್
ದೊಡ್ಡಬಳ್ಳಾಪುರ: ಯಾವುದೇ ಅಕ್ರಮಗಳು ನಡೆದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಯಾವುದೇ ಒತ್ತಡ ಪ್ರಭಾವಕ್ಕೆ ಮಣಿಯದಿರಿ. ಅಕ್ರಮಗಳ ಕುರಿತು ನಾಗರಿಕರು ನೇರವಾಗಿ ಯಾವುದೇ ಮುಜುಗರಗಳಿಲ್ಲದೆ ಪೊಲೀಸರಿಗೆ ದೂರು ಕೊಡಬಹುದು ಎಂದು ಬೆಂ.ಗ್ರಾ.ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ಹೇಳಿದರು.
ಇಲ್ಲಿನ ಬಸವಭವನದಲ್ಲಿ ಅವರು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಅದಕ್ಕೆ ಪ್ರತಿಕ್ರಿಯಿಸಿದರು. ಸಾರ್ವಜನಿಕರ ಸಹಕಾರ ಇದ್ದರೆ ಬಹುತೇಕ ಸಮಸ್ಯೆಗಳನ್ನು ಕೆಲವೇ ದಿನಗಳಲ್ಲಿ ಬಗೆಹರಿಸಬಹುದು. ದೊಡ್ಡಬಳ್ಳಾಪುರದಲ್ಲಿ ಟ್ರಾಫಿಕ್ ಸಮಸ್ಯೆ, ಮಟ್ಕಾ ದಂಧೆ, ಜೂಜು, ಮೀಟರ್ ಬಡ್ಡಿ ವ್ಯವಹಾರ, ಸಲ್ಯೂಷನ್ ತೆಗೆದುಕೊಳ್ಳುವ ಅಕ್ರಮ, ಚುಡಾಯಿಸುವಿಕೆ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಎಲ್ಲ ಬಗೆಯ ಸಮಸ್ಯೆಗಳಿಗೂ ಪೂರಕ ಕ್ರಮ ಕೈಗೊಳ್ಳಲಾಗುವುದು. ಕೊಲೆ ಪ್ರಕರಣಗಳು ತನಿಖೆಯಲ್ಲಿವೆ. ಯಾವುದನ್ನೂ ಪೊಲೀಸರು ಸಡಿಲಬಿಟ್ಟಿಲ್ಲ. ಪುಂಡಪೋಕರಿಗಳನ್ನು ಪೊಲೀಸರು ನಿರ್ದಾಕ್ಷಿಣ್ಯವಾಗಿ ನಿಯಂತ್ರಿಸಿ ಎಂದರು. ಸಿಬ್ಬಂದಿ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದು ಇಡೀ ರಾಜ್ಯದಲ್ಲೇ ಇರುವ ಸಮಸ್ಯೆ. ಈ ಬಗ್ಗೆಯೂ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಇಡೀ ಜಿಲ್ಲೆಯಲ್ಲಿ ಮಹಿಳಾ ಎಸೈ ಇಲ್ಲ. ಈ ಬಗ್ಗೆ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ವೆಂಕಟರಮಣಯ್ಯ ಮಾತನಾಡಿ, ಪೊಲೀಸ್ ಠಾಣೆಯಲ್ಲಿ ಎಲ್ಲ ಬಗೆಯ ಪ್ರಕರಣಗಳಿಗೂ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಅದಕ್ಕೂ ಮುನ್ನ ಪೊಲೀಸ್ ಠಾಣೆಗೆ ಪ್ರಕರಣ ಹೋಗದಂತೆ ಸೌಜನ್ಯಯುತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಎಲ್ಲ ಸಮಸ್ಯೆಗಳ ಬಗ್ಗೆ ಪೊಲೀಸರಿಗೆ ಅರಿವಿದೆ. ನಾನೂ ಕೂಡ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸುತ್ತೇನೆ. ನಿಯಮಿತವಾಗಿ ಈ ಬಗೆಯ ಸಭೆಗಳು ನಡೆಯಲಿ ಎಂದರು.
ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ದಲಿತರ ವಿರುದ್ಧದ ಪ್ರಕರಣಗಳಲ್ಲಿ ಗಂಭೀರವಾಗಿ ಪೊಲೀಸರು ಪರಿಶೀಲಿಸಬೇಕು. ಇತ್ತೀಚೆಗೆ ತಾಲೂಕಿನಲ್ಲಿ ಈ ಬಗೆಯ ಘಟನೆಗಳು ನಡೆಯುತ್ತಿವೆ. ಜನ ಪೊಲೀಸರು ಮತ್ತು ಸಾರ್ವಜನಿಕರ ಜೊತೆಗೆ ಸಮನ್ವಯದ ಭಾವನೆ ಇದ್ದರೆ ಸಮಸ್ಯೆ ಪರಿಹರಿಸುವುದು ಅತಿ ಸುಲಭ. ಅಬಕಾರಿ ಇಲಾಖೆ ಬಗ್ಗೆ ಇರುವ ದೂರುಗಳ ಬಗ್ಗೆ ತುರ್ತು ಕ್ರಮ ಅಗತ್ಯ ಎಂದರು.
ವಿಕಲಚೇತನ ಬಾಲಕಿಗೆ ಸಹಾಯಧನ ವಿತರಣೆ
ದೊಡ್ಡಬಳ್ಳಾಪುರ: ವಿಕಲಚೇತನ ಬಾಲಕಿಯೊಬ್ಬಳಿಗೆ ಗ್ರಾಮ ಪಂಚಾಯಿತಿಯಿಂದ ಲಭ್ಯವಾಗುವ 25 ಸಾವಿರ ರು.ಗಳ ಅನುದಾನದ ಚೆಕ್ ಅನ್ನು ಶಾಸಕ ಟಿ.ವೆಂಕಟರಮಣಯ್ಯ ವಿತರಿಸಿದರು. ತಾಲೂಕಿನ ಲಿಂಗನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ 16 ವರ್ಷದ ಪ್ರತಿಮಾಗೆ ಅನುದಾನ ವಿತರಿಸಿದ ಶಾಸಕರು, ಸರ್ಕಾರದಿಂದ ಒದಗಬಹುದಾದ ಸೂಕ್ತ ಸವಲತ್ತುಗಳನ್ನು ಬಾಲಕಿಯ ಕುಟುಂಬಕ್ಕೆ ಒದಗಿಸಿಕೊಡುವ ಭವನಸೆ ನೀಡಿದರು. ಈಕೆ ಕಳೆದ 5 ವರ್ಷದ ಹಿಂದೆ ಜ್ವರದಿಂದ ತನ್ನ ಕಾಲುಗಳ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದಳು. ತಾಪಂ ಅಧ್ಯಕ್ಷೆ ನರಸಮ್ಮ, ಸದಸ್ಯೆ ಶ್ಯಾಮಲ, ಮಂಜುನಾಥ್, ಜಿ.ಲಕ್ಷ್ಮೀಪತಿ, ಬೈರೇಗೌಡ ಮತ್ತಿತರರು ಭಾಗವಹಿಸಿದ್ದರು.