ಒಡೆಯರ್ಗೆ ವಿವಿಧೆಡೆ ಅಶ್ರುತರ್ಪಣ
ದೇವರಾಜ ಅರಸು ಸಾಂಸ್ಕೃತಿಕ ವೇದಿಕೆ
ಮಾಗಡಿ: ಮೈಸೂರು ಸಂಸ್ಥಾನದ ಮತ್ತು ಯದುವಂಶದ ಕೊನೆಯ ಕುಡಿಯಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರ ನಷ್ಟ ಉಂಟಾಗಿದೆ ಎಂದು ದೇವರಾಜ ಅರಸು ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ.ವಿ.ಜಯರಾಮು ಗುಣಗಾನ ಮಾಡಿದರು. ಮಾಗಡಿ ಪಟ್ಟಣದ ಶ್ರೀರಾಮೇಶ್ವರ ಬಡಾವಣೆಯ ಬಳಿ ದೇವರಾಜು ಅರಸು ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ ಒಡೆಯರ್ ಮೈಸೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು ಎಂದರು. ವೇದಿಕೆಯ ಅಧ್ಯಕ್ಷ ಪಿ.ವಿ.ಸೀತಾರಾಂ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಾಜಕೀಯ ಮುತ್ಸದ್ದಿಯಾಗಿದ್ದರು.
ಅವರು ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದರು. ಇವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ತುಂಬ ನಷ್ಟ ಉಂಟಾಗಿದ್ದು, ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸಿದರು. ವೇದಿಕೆ ಖಜಾಂಚಿ ಹೊಸಪೇಟೆ ಜಯಣ್ಣ, ನೇತೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ದಶರಥ, ಯುವ ಮುಖಂಡ ನಾಗರಾಜು, ಸಹಕಾರ್ಯದರ್ಶಿ ಹಾಗೂ ಶಿಕ್ಷಕ ಮಾರಣ್ಣ, ಟಿ.ಎಂ. ಶ್ರೀನಿವಾಸ್, ಎಂ.ಎಸ್. ಸಿದ್ದಲಿಂಗೇಶ್ವರ್ ಮೂರ್ತಿ, ರಂಗನಾಥ್, ರಂಗಹನುಮಯ್ಯ, ಶಿವಣ್ಣ ಇತರರು ಇದ್ದರು.
ಅಭಿವೃದ್ಧಿಗೆ ಆದ್ಯತೆ ಕೊಟ್ಟರು
ದೊಡ್ಡಬಳ್ಳಾಪುರ: ಮೈಸೂರು ಸಂಸ್ಥಾನದ ಸರ್ವಾಂಗೀಣ ಪ್ರಗತಿ ಮತ್ತು ಮಾದರಿ ಅಭಿವೃದ್ಧಿಗೆ ಒಡೆಯರ್ ಕುಟುಂಬದ ಕೊಡುಗೆ ಅನನ್ಯ. ಮಹಾರಾಜರಾಗಿ ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ರೀತಿ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ನಾಡನ್ನು ಕಟ್ಟಿದ ಬಗೆ ಅನುಕರಣೀಯ ಎಂದು ಇಲ್ಲಿನ ಅನೇಕ ಸಂಘಟನೆಗಳು ಹೇಳಿವೆ.
ಒಡೆಯರ್ ಕುಟುಂಬದ ಕೊನೆಯ ಕೊಂಡಿ ಎನಿಸಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿರುವ ಇಲ್ಲಿನ ಅನೇಕ ಸಂಘಟನೆಗಳು, ಮೈಸೂರು ರಾಜವಂಶಸ್ಥರ ಜನಪ್ರೀತಿಯನ್ನು ಶ್ಲಾಘಿಸಿವೆ.
ನೀರಾವರಿ, ಶಿಕ್ಷಣ, ಮೂಲಸೌಕರ್ಯಗಳಿಗೆ ವಿಶೇಷ ಆದ್ಯತೆ ನೀಡಿ ನಾಡಿನ ಜನರ ಏಳಿಗೆ ಬಯಸಿದ ರಾಜರ ಬದುಕು ಆದರ್ಶನೀಯ. ಶ್ರೀಕಂಠದತ್ತರು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ತನ್ನ ರಾಜತ್ವದ ನೀತಿಗಳನ್ನು ಸೀಮಿತ ವ್ಯಾಪ್ತಿಗೆ ಮಾತ್ರ ಬಳಕೆ ಮಾಡಿಕೊಳ್ಳುವ ಮೂಲಕ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು.
ರಾಜಕಾರಣದಲ್ಲೂ ಛಾಪು ಮೂಡಿಸಿದ್ದ ಒಡೆಯರು ಅಕಾಲಿಕವಾಗಿ ಸಾವಿಗೀಡಾಗಿರುವುದು ಶೋಕದ ವಿಚಾರ ಎಂದಿವೆ.
ಸಂತಾಪ: ಶ್ರೀಕಂಠದತ್ತರ ನಿಧನಕ್ಕೆ ಇಲ್ಲಿನ ಕನ್ನಡ ಜಾಗೃತ ಪರಿಷತ್ತಿನ ಮುಖಂಡರಾದ ಡಿ.ವಿ.ಅಶ್ವತ್ಥಪ್ಪ, ತ.ನ.ಪ್ರಭುದೇವ್, ಮಹಾಬಲೇಶ್ವರ್, ಎಂ.ಕೃಷ್ಣಮೂರ್ತಿ, ಬಿ.ಜಿ.ಅಮರನಾಥ್, ರುಮಾಲೆ ನಾಗರಾಜ್, ಸುಲೋಚನಮ್ಮ ವೆಂಕಟರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಕೆ.ಆರ್.ರವಿಕಿರಣ್, ಎಚ್.ಎನ್.ಪ್ರಕಾಶ್, ಪ್ರವೀಣ್, ಚಿಕ್ಕಣ್ಣ, ಕನ್ನಡ ಪಕ್ಷದ ಮುಖಂಡರಾದ ಸಂಜೀವನಾಯಕ್, ಡಿ.ಪಿ.ಆಂಜನೇಯ, ಸಂಸ್ಕೃತಿ ಟ್ರಸ್ಟ್ನ ಎಚ್.ಎಸ್.ನಾಗೇಶ್, ಸಂಪತ್ಕುಮಾರ್, ಛಾಯಾಗ್ರಾಹಕರ ಸಂಘದ ಬಸವರಾಜು, ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಮಾಜಿ ನಗರಸಭಾ ಸದಸ್ಯೆ ಪ್ರಮೀಳಾ ಮಹದೇವ್, ಹಿರಿಯ ಪತ್ರಕರ್ತ ರಾಜೇಂದ್ರಕುಮಾರ್, ತೂಬಗೆರೆ ಷರೀಫ್ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಅಂಬೇಡ್ಕರ್ ಸಂಘದ ನಮನ
ದೇವನಹಳ್ಳಿ: ಮೈಸೂರು ಸಂಸ್ಥಾನದ ಯದುವಂಶದ ಕೊನೆಯ ಮಹರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಇಲ್ಲಿನ ಡಾ.ಅಂಬೇಡ್ಕರ್ ಯುವಶಕ್ತಿ ಸಂಘದ ರಾಜ್ಯಾಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಂ.ಮೂರ್ತಿ ಹಾಗೂ ಕಾರ್ಯಕರ್ತರು ಹೊಸ ಬಸ್ ನಿಲ್ದಾಣದಲ್ಲಿ ಬುಧವಾರ ಒಡೆಯರ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಸಂತಾಪ ಸೂಚಿಸಿದರು.
ಈ ಸಂಧರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ ಶ್ರೀಕಂಠದತ್ತರು ಮೈಸೂರು ಅಲ್ಲದೆ ರಾಜ್ಯದ ಜನತೆಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ವೈಸೂರು ತನ್ನ ಪರಂಪರೆಯ ಸಾಂಸ್ಕೃತಿಕ ರಾಯಭಾರಿಯನ್ನು ಕಳೆದುಕೊಂಡಿದೆ ಎಂದರು.
ಛಾಯಾಗ್ರಾಹಕರ ಸಂತಾಪ
ದೊಡ್ಡಬಳ್ಳಾಪುರ: ಇಲ್ಲಿನ ದೊಡ್ಡಬಳ್ಳಾಪುರ ತಾಲೂಕು ಫೋಟೋ ಮತ್ತು ವೀಡಿಯೋ ಛಾಯಾಗ್ರಾಹಕರ ಸಂಘದ ನೇತೃತ್ವದಲ್ಲಿ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಸವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಮಹತ್ತರ ಸಾಧನೆಯನ್ನು ಮೈಸೂರು ಅರಸರು ಮಾಡಿದ್ದರು. ಅವರ ಕುಟುಂಬದ ಕೊನೆಯ ಅರಸರಾಗಿದ್ದ ಶ್ರೀಕಂಠದತ್ತರು ನಿಧನರಾಗಿರುವುದು ತುಂಬಲಾರದ ನಷ್ಟ ಎಂದರು. ಹಿರಿಯ ಛಾಯಾಗ್ರಾಹಕ ಬಿ.ಶಿವರಾಂ, ಪಿಳ್ಳವೆಂಕಟಪ್ಪ, ನಿರಂಜನ್, ಶಂಕರಾಚಾರ್, ರಾಜು ಮತ್ತಿತತರು ಭಾಗವಹಿಸಿದ್ದರು.