ಪರಿಸರ ಸಂರಕ್ಷಣೆ ಮಾಡದಿದ್ದಲ್ಲಿ ಮನುಕುಲಕ್ಕೆ ಅಪಾಯ
ರಾಮನಗರ: ಮಾನವ ದುರಾಸೆಯಿಂದ ಪರಿಸರ ಸಂಪನ್ಮೂಲಗಳನ್ನು ದೋಚುತ್ತಿದ್ದಾನೆ. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಮಾಡದಿದ್ದಲ್ಲಿ ಮಾನವ ಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಭಾರತೀಯ ಸಂಸ್ಕಣತಿ ವಿದ್ಯಾಪೀಠ ಸಂಸ್ಥೆಯ ನಿರ್ದೇಶಕಿ ಡಾ.ಕೆ.ಎನ್.ಪುಷ್ಪಲತಾ ಆತಂಕ ವ್ಯಕ್ತಪಡಿಸಿದರು.
ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಹಸಿರು ಪಡೆ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಸಸಿಗಳನ್ನು ನೆಟ್ಟು, ಪೋಷಿಸಬೇಕು ಬೇಕು ಎಂದರು.
ಪರಿಸರವನ್ನು ನಾವು ಉಳಿಸಿದರೆ, ಪರಿಸರ ನಮ್ಮನ್ನು ಉಳಿಸುತ್ತದೆ. ಉಸಿರಾಡಲು ಗಾಳಿ, ಕುಡಿಯಲು ನೀರು, ಬೆಳವಣಿಗೆಗೆ ಅಗತ್ಯವಾದ ಬೆಳಕು, ಬದುಕಲು ಭೂಮಿ ಪ್ರಾಣಿ ಸಂಕುಲಕ್ಕೆ ಪ್ರಕಣತಿ ನೀಡಿದ ಕೊಡುಗೆಯಾಗಿದೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಸ್ವಚ್ಛ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲು ಇಕೋ ಕ್ಲಬ್ ಘಟಕವನ್ನು ಸ್ಥಾಪಿಸಲಾಗಿದ್ದು, ಕಾಲೇಜಿನ ಆವರಣದಲ್ಲಿ, ಬಡಾವಣೆಗಳ ರಸ್ತೆಯ ಇಕ್ಕೆಲಗಳಲ್ಲಿ ಬಗೆಬಗೆಯ ಸಸಿಗಳನ್ನು ನೆಡಲಾಗುವುದು. ಆಲ, ಬೇಲ, ನೇರಳೆ, ಮಾವು, ಹತ್ತಿ ಸೇರಿದಂತೆ ಇನ್ನಿತರೆ ಹಣ್ಣಿನ ಗಿಡಗಳನ್ನು ಬೆಳೆಸುವುದರಿಂದ ಪಕ್ಷಿಗಳಿಗೆ ತಿನ್ನಲು ಆಹಾರ ದೊರಕುತ್ತದೆ. ಇದರಿಂದ ಜೀವ ವೈವಿಧ್ಯ ಉಳಿಯುತ್ತದೆ ಎಂದು ಪುಷ್ಪಲತಾ ಹೇಳಿದರು.
ಸೇವಿಸುವ ಗಾಳಿ ವಿಷ: ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಪ್ಲಾಸ್ಟಿಕ್ನ ಬಳಕೆ ಮಾಡಲಾಗುತ್ತಿದೆ. ಕೈಗಾರಿಕೆಗಳು, ನಗರಗಳ ತ್ಯಾಜ್ಯವನ್ನು ನದಿಗಳಿಗೆ ಹರಿಸುವುದು. ಮಿತಿಮೀರಿದ ಗಣಿಗಾರಿಕೆ, ವಾಹನ ದಟ್ಟಣೆ, ರಸಗೊಬ್ಬರದ ಅವ್ಯಾಹತ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಕುಡಿಯುವ ನೀರು, ತಿನ್ನುವ ಆಹಾರ, ಸೇವಿಸುವ ಗಾಳಿ ವಿಷಮಯವಾಗುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಜಿ.ಶಿವಣ್ಣ ವಿಷಾದಿಸಿದರು.
ಪರಿಸರ ಮಾಲಿನ್ಯದಿಂದ ಮನಷ್ಯನಿಗೆ ನೂರಾರು ಬಗೆಯ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಕಾಯಿಲೆ ಪತ್ತೆಗಾಗಿ ಹತ್ತಾರು ಪರೀಕ್ಷೆಗಳು, ಚಿಕಿತ್ಸೆಗಾಗಿ ಸಾವಿರಾರು ರುಪಾಯಿ ವೆಚ್ಚವಾಗುತ್ತಿದೆ. ಕೆಲವೊಮ್ಮೆ ಎಷ್ಟೇ ಹಣ ಖರ್ಚು ಮಾಡಿದರೂ ರೋಗ ವಾಸಿಯಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಹಣ ದೋಚುತ್ತಿವೆ: ಇದನ್ನೇ ಬಂಡವಾಳವನ್ನಾಗಿಸಿಕೊಂಡ ಪಾಶ್ಚಿಮಾತ್ಯ ದೇಶಗಳ ಔಷಧ ಕಂಪನಿಗಳು ರೋಗವಾಸಿ ನೆಪದಲ್ಲಿ ಹಣ ದೋಚುತ್ತಿವೆ. ಮನುಷ್ಯ ರೋಗದ ಭಯದಲ್ಲಿ ಬದುಕು ದೂಡುವ ಆತಂಕ ಏರ್ಪಟ್ಟಿದೆ. ಪರಿಸರ ಸಮತೋಲನ ಕಾಪಾಡುವ ಕಡೆಗೆ ಗಮನ ಹರಿಸದಿದ್ದಲ್ಲಿ ಮಾರಕ ಕಾಯಿಲೆಗಳಿಗೆ ಬಲಿಯಾಗಿ ಮನುಕುಲವೇ ನಾಶವಾಗುವ ಸಂಭವವಿದೆ ಎಂದು ಹೇಳಿದರು.
ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಕೆ.ಎನ್.ಪುಟ್ಟಮ್ಮ ಹತ್ವಾರ್, ಪ್ರಾಂಶುಪಾಲ ಬಿ.ಗೋಪಾಲ್, ಉಪನ್ಯಾಸಕರಾದ ಪಿ.ಮಂಜುಳಾ, ವೆಂಕಟಾಚಲಯ್ಯ, ಜಿ.ಎಂ.ವೀಣಾ, ಎಚ್.ಎನ್.ಶಶಿಕಲಾ, ಶಾರದಾ ಬಡಿಗೇರಾ ಮತ್ತಿತರರು ಭಾಗವಹಿಸಿದ್ದರು. ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.