ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಸಜ್ಜು
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಡಿ. 11
ಪ್ರತಿಷ್ಠಿತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ತಯಾರಿ ನಡೆದಿದೆ. ಉಪ ಚುನಾವಣೆಯಲ್ಲಿ ಶಸ್ತ್ರ ತ್ಯಜಿಸಿ, ಜೆಡಿಎಸ್ಗೆ ಸಾಥ್ ನೀಡಿದ್ದ ಬಿಜೆಪಿ ಈ ಬಾರಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಸಜ್ಜಾಗಿದೆ.
ಈ ಕ್ಷೇತ್ರವು ಉಪ ಚುನಾವಣೆಯಲ್ಲಿ ನೇರ ಹಣಾಹಣಿಗೆ ಅಖಾಡವಾಗಿತ್ತು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಿಚ್ಚಳವಾಗಿದೆ. ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್, ಮತ್ತೆ ಅಧಿಪತ್ಯ ಸ್ಥಾಪನೆಗೆ ಜೆಡಿಎಸ್, ಮೋದಿ ಅಲೆಯೊಂದಿಗೆ ಕ್ಷೇತ್ರ ವಶಕ್ಕೆ ಬಿಜೆಪಿ ಕಸರತ್ತು ಪ್ರಾರಂಭಿಸಿದೆ.
ಸಂಭವನೀಯ ಅಭ್ಯರ್ಥಿಗಳು: ಮೋದಿ ಅಲೆ ಈಗಾಗಲೇ ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ಜೆಡಿಎಸ್
ತೆಕ್ಕೆಯಲ್ಲಿದ್ದ ಈ ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಕೈ ವಶ ಮಾಡಿಕೊಟ್ಟಿರುವ ಡಿ.ಕೆ.ಸುರೇಶ್ ಅವರನ್ನೇ ಸಾರ್ವತ್ರಿಕ ಚುನಾವಣೆಗೂ ಅಭ್ಯರ್ಥಿ ಎಂದು ಕಾಂಗ್ರೆಸ್ ಬಹುತೇಕ ತೀರ್ಮಾನಿಸಿದೆ. ಹೀಗಾಗಿ ಅವರೆದುರು ಆ ಪಕ್ಷದ ಇತರೆ ಆಕಾಂಕ್ಷಿಗಳ ಆಟ ನಡೆಯದಾಗಿದೆ.
ಮತ್ತೆ ಅನಿತಾ ಕಣಕ್ಕೆ?: ತೃತೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸುವ ಕನಸು ಕಟ್ಟಿಕೊಂಡ ಜೆಡಿಎಸ್ ಈ ಬಾರಿ ಸೀಮಿತ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಲು ನಿರ್ಧರಿಸಿದೆ. ಈ ಪೈಕಿ ಬೆಂಗಳೂರು ಗ್ರಾಮಾಂತರವೂ ಒಂದು. ಸತತ ಎರಡು ಚುನಾವಣೆಯಲ್ಲಿ ಸೋಲನುಭವಿಸಿರುವ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನೇ ಮತ್ತೆ ಕಣಕ್ಕಿಳಿಸುವ ಇರಾದೆ ದಳಪತಿಗಳದ್ದಾಗಿದೆ.
ಲೋಕಸಭೆ ಚುನಾವಣೆಗೆ ಕೆಲ ಕ್ಷೇತ್ರಗಳಲ್ಲಿ ಹಾಲಿ ಶಾಸಕರನ್ನೂ ಕಣಕ್ಕಿಳಿಸುವ ಚಿಂತನೆಯನ್ನು ಜೆಡಿಎಸ್ ನಡೆಸಿದೆ ಎನ್ನುವ ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಗಮನಿಸಿದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ವತಃ ಅವರೇ ಅಖಾಡಕ್ಕೆ ಇಳಿಯುವ ಸಾಧ್ಯತೆಯನ್ನೂ ತಳ್ಳಿ
ಹಾಕಲಾಗದು.
ಬಿಜೆಪಿಯಲ್ಲಿ ಶಾಸಕದ್ವಯರು: ಇನ್ನು, ನರೇಂದ್ರ ಮೋದಿ ಅಲೆಯಲ್ಲಿ ಮೋಡಿ ಮಾಡಲು ಹಂಬಲಿಸುತ್ತಿರುವ ಬಿಜೆಪಿ ಕೂಡ ಅಭ್ಯರ್ಥಿಗಳ ಹುಡುಕಾಟಕ್ಕೆ ಇಳಿದಿದೆ. ಆ ಪಕ್ಷದಿಂದ ಒಕ್ಕಲಿಗ ಸಮುದಾಯಕ್ಕೆ ಸೇರಿದ ವಿಧಾನ ಪರಿಷತ್ ಟದಸ್ಯ ಅಶ್ವತ್ಥ ನಾರಾಯಣ್ ಹಾಗೂ ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ ಹೆಸರು ಮುಂಚೂಣಿಯಲ್ಲಿವೆ. ಬೆಳಗಾವಿ ಅಧಿವೇಶನದ ಮೇಲ್ಮನೆ ಕಲಾಪದಲ್ಲಿ ಅಶ್ವತ್ಥ ನಾರಾಯಣ್ ಅವರು ಮಂಚನಬೆಲೆಯಲ್ಲಿ ಪ್ರವಾಸಿಗರ ಸಾವು, ಜಲಾಶಯಗಳ ನೀರಿನ ಬಳಕೆ ಸೇರಿದಂತೆ ರಾಮನಗರ ಜಿಲ್ಲೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಒತ್ತು ನೀಡಿದ್ದಾರೆ. ಇದು ಅವರು ಈ ಕ್ಷೇತ್ರದಲ್ಲಿ ಸ್ಪರ್ಧೆಗೆ ಆಸಕ್ತಿ ತೋರಿದ್ದಾರೆ ಎನ್ನುವುದನ್ನು ಬಿಂಬಿಸುತ್ತದೆ.
ಸಿಪಿವೈ ನಡೆ ನಿಗೂಢ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಪಿ.ಯೋಗೇಶ್ವರ್ ಸ್ವತಃ ಸ್ಪರ್ಧೆಗೆ ಇಳಿಯುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಆದರೆ, ಪ್ರಬಲ ಅಭ್ಯರ್ಥಿಯೊಬ್ಬರನ್ನು ಸಮಾಜವಾದಿ ಪಕ್ಷದಿಂದ ಕಣಕ್ಕೆ ಇಳಿಸಿ ಕ್ಷೇತ್ರದಲ್ಲಿ ಸಾಮರ್ಥ್ಯ ಸಾಬೀತುಪಡಿಸುವೆ ಎನ್ನುವ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಉಪ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಿಂದಲೇ ಕಾಂಗ್ರೆಸ್ ಬೆಂಬಲಿಸಿದ್ದರು. ನಂತರದಲ್ಲಿ ಕಾಂಗ್ರೆಸ್ ಜತೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈಗಾಗಲೇ ಅವರ ಬೆಂಬಲಿಗರೇನಕರು ಕಾಂಗ್ರೆಸ್ ಕಡೆ ಗುಳೆ ಹೊರಟಿದ್ದಾರೆ. ಪಕ್ಷವೊಂದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಅವರು ರಾಜ್ಯ ಘಟಕಕ್ಕೆ ಅಧ್ಯಕ್ಷರ ಬದಲಾವಣೆಯಲ್ಲೇ ಬ್ಯುಸಿಯಾಗಿದ್ದಾರೆ. ಸ್ವಕ್ಷೇತ್ರ, ತವರು ಜಿಲ್ಲೆ ಘಟಕಗಳನ್ನೇ ರಚಿಸಿಲ್ಲ.
ಡಿಕೆಸು ಚಟುವಟಿಕೆ ಬಿರುಸು: ಉಪ ಚುನಾವಣೆ ಫಲಿತಾಂಶ ಪ್ರಕಟವಾದ ದಿನದಿಂದಲೇ ಸಂಸದ ಡಿ.ಕೆ.ಸುರೇಶ್ ಬಿರುಸಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಸಂಸದ ಸ್ಥಾನ ಮೀರಿದ ಜವಾಬ್ದಾರಿಗಳ ನಿಭಾವಣೆ, ಅಧಿಕಾರಿಗಳ ಸಭೆ, ಕಾರ್ಯಕ್ರಮಗಳಲ್ಲಿ ಭಾಗಿ ಸಹಿತ ಅವರ ನಡೆ ಗಮನಿಸಿದರೆ ಸಾರ್ವತ್ರಿಕ ಚುನಾವಣೆ ತಯಾರಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಜೆಡಿಎಸ್ ಹಿಂದೆ ಬಿದ್ದಿಲ್ಲ: ರಾಮನಗರದ ಸ್ಥಳೀಯ ಸಂಸ್ಥೆಗಳಲ್ಲಿ ಆಪರೇಷನ್ ಕಾಂಗ್ರೆಸ್ ಕಾರ್ಯಾಚರಣೆ ಮೂಲಕ ಜೆಡಿಎಸ್ ಅನ್ನು ದುರ್ಬಲಗೊಳಿಸುವ ಪ್ರಯತ್ನ ಆರಂಭವಾಗಿದೆ. ಉಪ ಚುನಾವಣೆ ನಂತರ ಕಾಂಗ್ರೆಸ್ ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಾರ್ವತ್ರಿಕ ಚುನಾವಣೆಯತ್ತ ಗಮನ ಕೇಂದ್ರೀಕರಿಸಿ, ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.